Friday, 22nd November 2024

ಆಸ್ಪತ್ರೆಗಳ ವೈದ್ಯಕೀಯ, ಇತರ ಸಿಬ್ಬಂದಿಗೆ ಮೇಕಪ್ ನಿಷೇಧ: ಹರ್ಯಾಣ ಸರ್ಕಾರ

ಚಂಡೀಗಢ: ಆಸ್ಪತ್ರೆಗಳಲ್ಲಿ ವೈದ್ಯಕೀಯ ಮತ್ತು ಇತರ ಸಿಬ್ಬಂದಿಗೆ ಮೇಕಪ್, “ಫಂಕಿ ಹೇರ್ ಸ್ಟೈಲ್” ಮತ್ತು ಉದ್ದನೆಯ ಉಗುರು ಬಿಡುವುದನ್ನು ಹರ್ಯಾಣ ಸರ್ಕಾರ ನಿಷೇಧಿಸಿದೆ.

ಹರ್ಯಾಣ ರಾಜ್ಯ ಸರ್ಕಾರವು ಆರೋಗ್ಯ ವೃತ್ತಿಪರರಿಗೆ ಡ್ರೆಸ್ ಕೋಡ್ ಅನ್ನು ಜಾರಿಗೆ ತರಲಿದ್ದು, ಟಿ-ಶರ್ಟ್ಗಳು, ಡೆನಿಮ್ಗಳು ಮತ್ತು ಸ್ಕರ್ಟ್ಗಳನ್ನು ಧರಿಸುವುದನ್ನು ನಿಷೇಧಿಸಿದೆ. ರಾಜ್ಯ ಸರ್ಕಾರ ಸಿದ್ಧಪಡಿಸುತ್ತಿರುವ ಡ್ರೆಸ್ ಕೋಡ್ ಅಂತಿಮ ಹಂತದಲ್ಲಿದೆ ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ‘ಕೆಲವು ರೀತಿಯ ಉಡುಪುಗಳನ್ನು ನಿಷೇಧಿಸುವ ಕ್ರಮವು ಅಂಬಾಲಾದ ವೈದ್ಯ ಕೀಯ ಸಂಘಟನೆಯಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯಿತು. ಡ್ರೆಸ್ ಕೋಡ್ ಅನ್ನು ಜಾರಿಗೊಳಿಸುವುದು ಸಿಬ್ಬಂದಿಗೆ ವೃತ್ತಿಪರ ದೃಷ್ಟಿಕೋನವನ್ನು ನೀಡುತ್ತದೆ ಎಂದು ವೈದ್ಯರ ಸಂಸ್ಥೆ ಹೇಳಿದೆ. ಆದರೆ ದಾದಿಯರ ಸಂಘವು ಈ ವಿಚಾರದಲ್ಲಿ ಸರ್ಕಾರವು ತನ್ನ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿತ್ತು ಎಂದು ಹೇಳಿದೆ.

ವಾರಾಂತ್ಯ, ಸಂಜೆ ಮತ್ತು ರಾತ್ರಿ ಪಾಳಿ ಸೇರಿದಂತೆ ದಿನದ 24 ಗಂಟೆಗಳ ಕಾಲ ಕರ್ತವ್ಯದಲ್ಲಿರುವ ಉದ್ಯೋಗಿಗಳು ಡ್ರೆಸ್ ಕೋಡ್ ಅನ್ನು ಅನುಸರಿಸಬೇಕು ಎಂದು ಹೇಳಿದರು. ಒಂದು ವೇಳೆ ದಾದಿಯರು ಡ್ರೆಸ್ ಕೋಡ್ ನಿಯಮ ಉಲ್ಲಂಘಿಸಿದರೆ ಅಂತಹ ನೌಕರರನ್ನು ದಿನಕ್ಕೆ ಗೈರುಹಾಜರೆಂದು ಗುರುತಿಸಲಾಗುತ್ತದೆ. ಆರೋಗ್ಯ ಕೇಂದ್ರಗಳಲ್ಲಿ ಫಂಕಿ ಹೇರ್ ಸ್ಟೈಲ್, ಭಾರವಾದ ಆಭರಣಗಳು, ಪರಿಕರಗಳು, ಮೇಕಪ್, ಕೆಲಸದ ವೇಳೆ ಉದ್ದನೆಯ ಉಗುರುಗಳು ಸ್ವೀಕಾರಾರ್ಹವಲ್ಲ ಎಂದು ಸಚಿವ ವಿಜ್ ಹೇಳಿದ್ದಾರೆ.

ಉದ್ಯೋಗಿಗಳು ತಮ್ಮ ಹುದ್ದೆಯನ್ನು ಪ್ರಕಟಿಸುವ ಹೆಸರಿನ ಬ್ಯಾಡ್ಜ್ ಅನ್ನು ಧರಿಸಬೇಕಾಗುತ್ತದೆ. ಈಗ ಎಲ್ಲವನ್ನೂ ನಿಷೇಧಿಸಿದೆ.

ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿನ ಸಿಬ್ಬಂದಿಯಲ್ಲಿ ಶಿಸ್ತು, ಏಕರೂಪತೆ ಮತ್ತು ಸಮಾನತೆ ಕಾಪಾಡುವುದು ವಸ್ತ್ರ ಸಂಹಿತೆ ನೀತಿಯ ಉದ್ದೇಶವಾಗಿದೆ ಎಂದು ವಿಜ್ ಹೇಳಿದರು.