Friday, 20th September 2024

HD Kumaraswamy: 2030ರ ವೇಳೆಗೆ ಶೇ.30ರಷ್ಟು ಎಲೆಕ್ಟ್ರಿಕ್ ವಾಹನಗಳ ಬಳಕೆ ಗುರಿ: ಎಚ್‌ಡಿಕೆ

HD Kumaraswamy

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ 2030ರ ವೇಳೆಗೆ ಶೇ.30ರಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡಲು ಗುರಿ ನಿಗದಿಪಡಿಸಲಾಗಿದ್ದು, ಆ ಗುರಿ ಮುಟ್ಟಲು ಸರ್ವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದರು.

ವಿಶ್ವ EV (ಎಲೆಕ್ಟ್ರಿಕ್ ವಾಹನ) ದಿನ ಅಂಗವಾಗಿ ಭಾರತೀಯ ಅಟೋಮೊಬೈಲ್ ಸೊಸೈಟಿ (Society of Indian Automobile Manufacturers-SIAM) ಹಮ್ಮಿಕೊಂಡಿದ್ದ ಎರಡನೇ ಆವೃತ್ತಿಯ ಎಲೆಕ್ಟ್ರಿಕ್ ವಾಹನಗಳ ರ‍್ಯಾಲಿಯನ್ನು ನವದೆಹಲಿಯ ಭಾರತ್ ಮಂಟಪದಲ್ಲಿ ಉದ್ಘಾಟಿಸುವ ಮುನ್ನ ಸಚಿವರು ಮಾತನಾಡಿದರು.

ಪ್ರಧಾನಿಗಳು ನಿಗದಿಪಡಿಸಿರುವ ಗುರಿ ಮುಟ್ಟಲು ಈಗಾಗಲೇ ಅನೇಕ ನೀತಿಗಳನ್ನು ರೂಪಿಸಲಾಗಿದ್ದು, ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನ (EV) ಉದ್ಯಮವೂ ಭಾರತದಲ್ಲಿ ವೇಗಗತಿಯಲ್ಲಿ ಬೆಳೆಯುತ್ತಿದೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ | HD Kumaraswamy: ಕೇಂದ್ರ ಸರ್ಕಾರದಿಂದ ಆಟೊ ಉದ್ದಿಮೆಗೆ ಉತ್ತೇಜನ; ಉದ್ಯೋಗವಕಾಶ ಹೆಚ್ಚಳ ನಿರೀಕ್ಷೆ

ಪರಿಸರಕ್ಕೆ ಪೂರಕವಾದ ರೀತಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದು, ಗ್ರಾಹಕರಿಗೆ ಸುಲಭವಾಗಿ ಕೈಗೆಟುಕುವಂತೆ ಕ್ರಮ ವಹಿಸಲಾಗಿದೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಮುಂದಿನ ಪೀಳಿಗೆಯ ಇಂಧನ ಕ್ಷಮತೆ ತಂತ್ರಜ್ಞಾನ ಅಭಿವೃದ್ಧಿಗೆ ಒತ್ತು ನೀಡುವ ಹಿನ್ನೆಲೆಯಲ್ಲಿ ಸುಧಾರಿತ ಬ್ಯಾಟರಿ ಸೆಲ್‌ಗಳಿಗೆ (ACC) ಪ್ರೋಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ((PLI) ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದ ಸಚಿವರು, ₹18,100 ಕೋಟಿ ಗುರಿಯ ಅನುದಾನ ಹೊಂದಿರುವ ಈ ಯೋಜನೆಯು 50 ಗಿಗಾ ವಾಟ್-ಗೋಚಾರ್ (GWh) ಉತ್ಪಾದನಾ ಸಾಮರ್ಥ್ಯವನ್ನು ಹೊಂದಲು ಉದ್ದೇಶಿಸಲಾಗಿದೆ. ಮೂರು ಕಂಪನಿಗಳು ಈಗಾಗಲೇ 30 GWh ನೀಡಲು ಸಾಮರ್ಥ್ಯ ಹೊಂದಿವೆ ಎಂದು ಸಚಿವರು ವಿವರಿಸಿದರು.

FAME-II ಯೋಜನೆಯು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳ ತಯಾರಿಕೆಗೆ ಕೊಡಲಾಗುತ್ತಿರುವ ಪ್ರೋತ್ಸಾಹವನ್ನು ಮುಂದುವರಿಸಲಾಗುವುದು. ಇದಕ್ಕೆ ₹15,500 ಕೋಟಿ ಹಣವನ್ನು ಒದಗಿಸಲು ಬಜೆಟ್ ನಿರ್ಧರಿಸಲಾಗಿದ್ದು, ಮಾಲಿನ್ಯ ಕಡಿಮೆ ಮಾಡುವುದು ಮತ್ತು ದೇಶಾದ್ಯಂತ ಸಾರ್ವಜನಿಕ ಸಾರಿಗೆಯನ್ನು ವಿದ್ಯುದೀಕರಿಸಲು ಈ ಮೊತ್ತವನ್ನು ಮೀಸಲಿಡಲಾಗಿದೆ ಎಂದು ಸಚಿವರು ಹೇಳಿದರು.

ಇದರೊಂದಿಗೆ ಮಾರ್ಚ್ 2024ರಲ್ಲಿ ಆರಂಭವಾದ ಎಲೆಕ್ಟ್ರಿಕ್ ಮೋಬಿಲಿಟಿ ಪ್ರೋತ್ಸಾಹ ಯೋಜನೆಗೆ (EMPS) ಸರ್ಕಾರ ಹೆಚ್ಚು ಒತ್ತು ನೀಡಿದೆ. ವರ್ಷದಿಂದ ವರ್ಷಕ್ಕೆ ಇದು ವೃದ್ಧಿಯಾಗುತ್ತಲೇ ಇದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ವ್ಯಾಪಕ ಬಳಕೆಗಾಗಿ ಸರ್ಕಾರದ ಅಚಲ ಬದ್ಧತೆ ಹೊಂದಿದೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ | Greater Bengaluru Governance Bill 2024: ಬೆಂಗಳೂರು ವಿಭಜನೆಗೆ ಬಿಜೆಪಿ-ಜೆಡಿಎಸ್‌ ವಿರೋಧ; ಇಲ್ಲಿ ಕನ್ನಡಿಗರೇ ಸಾರ್ವಭೌಮ ಎಂದ ಅಶೋಕ್

ಕಾರ್ಯಕ್ರಮದಲ್ಲಿ ಫಾರ್ಮುಲಾ ಒನ್ ರೇಸರ್ ಕಾರ್ತಿಕ್ ನಾರಾಯಣ್, SIAM ಅಧ್ಯಕ್ಷ ವಿನೋದ ಅಗರ್ವಾಲ್ , ಉಪಾಧ್ಯಕ್ಷ ಶೈಲೇಶ್ ಚಂದ್ರ, ನಿರ್ದೇಶಕರಾದ ರಾಜೇಶ್ ಮೆನನ್ ಮತ್ತು ಡೈರೆಕ್ಟರ್ ಜನರಲ್ ಪ್ರಶಾಂತ್ ಬ್ಯಾನರ್ಜಿ ಸೇರಿದಂತೆ ಉದ್ಯಮದ ಪ್ರಮುಖ ನಾಯಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರಾಲಿಗೆ ಹಸಿರು ನಿಶಾನೆ ತೋರಿಸುವ ಮುನ್ನ ಅವರು ಎಲೆಕ್ಟ್ರಿಕ್ ಆಟೋವನ್ನು ಚಾಲನೆ ಮಾಡಿದರು. ನಂತರ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಚಾಲನೆ ಮಾಡಿದರು.