Sunday, 15th December 2024

HDFC Bank: ಎಂಸಿಎಲ್​ಆರ್ ದರ ಪರಿಷ್ಕರಿಸಿದ ಎಚ್​ಡಿಎಫ್​ಸಿ ಬ್ಯಾಂಕ್; ಲೋನ್ ಇಎಂಐ ಹೆಚ್ಚಳ?

HDFC Bank

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ತನ್ನ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ (Marginal Cost of Funds-based Lending Rates- MCLR) ಅನ್ನು ಕೆಲವು ಅವಧಿಗೆ 5 ಬೇಸಿಸ್ ಪಾಯಿಂಟ್‌ (BPS)ಗಳಷ್ಟು ಹೆಚ್ಚಿಸಿದೆ. ಹೊಸ ಎಂಸಿಎಲ್ಆರ್ ದರಗಳು ಈಗ ಶೇ. 9.10ರಿಂದ ಶೇ. 9.50ರವರೆಗೆ ಇರಲಿದೆ. ಇದರೊಂದಿಗೆ ಕೆಲ ಸಾಲಗಳ ದರ ಹೆಚ್ಚಲಿದ್ದು, ಪರಿಣಾಮವಾಗಿ ಲೋನ್ ಇಎಂಐ ಅಧಿಕವಾಗುವ ಸಾಧ್ಯತೆ ಇದೆ.

ಎಚ್‌ಡಿಎಫ್‌ಸಿ ಬ್ಯಾಂಕಿನ ಎಲ್ಲ ಸಾಲದ ದರಗಳು ರೆಪೊ ದರಕ್ಕೆ ಸಂಬಂಧಿಸಿವೆ. ಪ್ರಸ್ತುತ ಇದನ್ನು ಶೇ. 6.50 ಎಂದು ನಿಗದಿಪಡಿಸಲಾಗಿದೆ.

ಏನಿದು ಎಂಸಿಎಲ್‌ಆರ್‌?

ಒಂದು ಬ್ಯಾಂಕ್​ನ ಕನಿಷ್ಠ ಬಡ್ಡಿದರವನ್ನು ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ಸ್ ಅಥವಾ ಎಂಸಿಎಲ್‌ಆರ್‌ ಎಂದು ಕರೆಯಲಾಗುತ್ತದೆ. ಇದಕ್ಕಿಂತ ಕಡಿಮೆ ಬಡ್ಡಿಗೆ ಬ್ಯಾಂಕ್ ಸಾಲ ಕೊಡುವಂತಿಲ್ಲ. 2016ರಲ್ಲಿ ಆರ್​ಬಿಐ ಎಂಸಿಎಲ್​ಆರ್ ಅನ್ನು ಜಾರಿಗೆ ತಂದಿದೆ. ಅದಕ್ಕಿಂತ ಮುಂಚೆ ಬೇಸ್ ರೇಟ್ ಇತ್ತು. ಇದರ ದರದಲ್ಲಿ ವ್ಯತ್ಯಾಸವಾದರೆ ಸಾಲದ ದರವೂ ವ್ಯತ್ಯಯವಾಗಬಹುದು. ಅಂದರೆ ಬಡ್ಡಿ ದರ ಏರಿಕೆ ಅಥವಾ ಇಳಿಕೆಯಾಗಬಹುದು. ಹೀಗಾಗಿ ಸಾಲಗಾರರಿಗೆ ಈ ಎಂಸಿಎಲ್​ಆರ್ ದರ ಮುಖ್ಯ ಎನಿಸುತ್ತದೆ.

ಎಂಸಿಎಲ್‌ಆರ್‌ ವ್ಯವಸ್ಥೆಯು ಆರ್‌ಬಿಐ ನೀತಿಯಿಂದ ಆಗುವ ಬಡ್ಡಿ ಇಳಿಕೆಯ ಪೂರ್ಣ ಲಾಭವನ್ನು ಗ್ರಾಹಕರಿಗೆ ತಲುಪಿಸಲು ನೆರವಾಗುತ್ತದೆ. ಅಂದರೆ ಒಂದು ವೇಳೆ ಠೇವಣಿಯ ಬಡ್ಡಿಯನ್ನು ಬ್ಯಾಂಕ್‌ ಕಡಿಮೆ ಮಾಡಿದರೆ, ಆಗ ಸಹಜವಾಗಿಯೇ ಬ್ಯಾಂಕ್‌ಗಳ ವೆಚ್ಚ ತಗ್ಗುವುದರಿಂದ ಸಾಲದ ಮೇಲಿನ ಬಡ್ಡಿಯನ್ನೂ ಇಳಿಕೆಯಾಗುತ್ತದೆ.

ಈ ಹೊಸ ಪರಿಷ್ಕೃತ ದರವು 6 ತಿಂಗಳು ಮತ್ತು 3 ವರ್ಷಗಳ ಅವಧಿಯ ಮೇಲೆ ಪರಿಣಾಮ ಬೀರುತ್ತದೆ. 6 ತಿಂಗಳ ಎಂಸಿಎಲ್ಆರ್ ಶೇ. 9.40ರಿಂದ ಶೇ. 9.45ಕ್ಕೆ ಏರಿಕೆಯಾಗಲಿದೆ.

ಪರಿಷ್ಕೃತ ದರ

ಅವಧಿಎಂಸಿಎಲ್‌ಆರ್‌
ಓವರ್‌ನೈಟ್‌9.10%
1 ತಿಂಗಳು9.15%
3 ತಿಂಗಳು9.30%
6 ತಿಂಗಳು9.45%
1 ವರ್ಷ9.45%
2 ವರ್ಷ9.45%
3 ವರ್ಷ9.50%

ವಿವಿಧ ಗ್ರಾಹಕ ಸಾಲಗಳಿಗೆ ಪ್ರಮುಖ ಮಾನದಂಡವಾದ 1 ವರ್ಷದ ಎಂಸಿಎಲ್ಆರ್ ಅನ್ನು ಶೇ. 9.45ರಲ್ಲಿ ಉಳಿಸಲಾಗಿದೆ. 3 ವರ್ಷಗಳ ಎಂಸಿಎಲ್ಆರ್ ಶೇ. 9.45ರಿಂದ ಶೇ. 9.50ಕ್ಕೆ ಏರಿದೆ. 2 ವರ್ಷಗಳ ಎಂಸಿಎಲ್ಆರ್ ಶೇ. 9.45ರಲ್ಲಿ ಸ್ಥಿರವಾಗಿದೆ.

ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಸಾಲದಲ್ಲಿ ಶೇ. 7ರಷ್ಟು ಏರಿಕೆ ಕಂಡು ಬಂದಿದ್ದು, 25.19 ಲಕ್ಷ ಕೋಟಿ ರೂ.ಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿನ ಸಾಲದ ಮೊತ್ತ 23.54 ಲಕ್ಷ ಕೋಟಿ ರೂ. ಆಗಿತ್ತು. 2024ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬ್ಯಾಂಕಿನ ಸರಾಸರಿ ಠೇವಣಿ 23.53 ಲಕ್ಷ ಕೋಟಿ ರೂ.ಗಳಾಗಿದ್ದು, ಕಳೆದ ವರ್ಷದ ಈ ಅವಧಿಯ ತ್ರೈಮಾಸಿಕದ 20.38 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ ಸುಮಾರು ಶೇ. 15.4ರಷ್ಟು ಬೆಳವಣಿಗೆಯಾಗಿದೆ.

ಈ ಸುದ್ದಿಯನ್ನೂ ಓದಿ: Cash Deposit Limit: ಯಂತ್ರದ ಮೂಲಕ ದಿನಕ್ಕೆ ಎಷ್ಟು ಹಣ ಬ್ಯಾಂಕ್‌ಗೆ ಠೇವಣಿ ಮಾಡಬಹುದು?