ಅತಿಯಾದರೆ ಅಮೃತವೂ ವಿಷ ಎನ್ನುವ ಮಾತಿದೆ. ಅಂದರೆ ಎಷ್ಟೇ ಒಳ್ಳೆಯದಾದರೂ ಮಿತಿಯಲ್ಲಿದ್ದರೆ ಮಾತ್ರ ಸರಿ. ಇತ್ತೀಚಿನ ಸೂಪರ್‌ಫುಡ್‌ಗಳ (Superfood) ಭರಾಟೆಯಲ್ಲಿ ಯಾವುದನ್ನು ತಿನ್ನಬೇಕು, ಎಷ್ಟು ತಿನ್ನಬೇಕೆಂಬ ಗೊಂದಲ ಸಹಜವಾಗಿ ಮೂಡುತ್ತದೆ. ಯಾವುದೋ ಹಣ್ಣು, ಇನ್ಯಾವುದೋ ಕಾಯಿ, ಮತ್ತ್ಯಾವುದೋ ಬೀಜಗಳು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸೂಪರ್‌ಫುಡ್ ಎಂಬ ಪಟ್ಟವನ್ನು ಅಲಂಕರಿಸಿ ಬಿಡುತ್ತವೆ. ಆದರೆ ಕೆಲವು ಆಹಾರಗಳು (Health Tips) ಹಾಗಲ್ಲ, ಶತಮಾನಗಳಿಂದಲೂ ತಮ್ಮ ಸಾಮರ್ಥ್ಯವನ್ನು ಅನುಮಾನಕ್ಕೆ ಎಡೆ ಇಲ್ಲದಂತೆ ಸಾಬೀತು ಪಡಿಸುತ್ತಲೇ ಬಂದಿವೆ.
ಎಲ್ಲರಿಗೂ ಇಷ್ಟವಾಗುವ ಬಾದಾಮಿಯನ್ನೇ ತೆಗೆದುಕೊಳ್ಳಿ. ಅದರ ಸದ್ಗುಣಗಳು ನಮಗೆ ಹೊಸದೇನಲ್ಲ, ಪ್ರಾಚೀನ ಕಾಲದಿಂದಲೂ ತಿಳಿದದ್ದೇ. ಹಾಗೆಂದು ಅದನ್ನು ಎಷ್ಟು ಬೇಕಿದ್ದರೂ ತಿನ್ನಬಹುದೇ? ವಿಟಮಿನ್ ಇ, ಕ್ಯಾಲ್ಶಿಯಂ, ಫಾಸ್ಫರಸ್, ಜಿಂಕ್, ಸೆಲೆನಿಯಂ, ನಿಯಾಸಿನ್, ಕಬ್ಬಿಣ, ಮೆಗ್ನೀಶಿಯಂ ಮುಂತಾದ ಹಲವಾರು ಒಳ್ಳೆಯ ಅಂಶಗಳನ್ನು ಒಳಗೊಂಡಿರುವ ಇದನ್ನು ನಮಗಿಷ್ಟ ಬಂದಷ್ಟು ತಿನ್ನಬೇಕೆ ಅಥವಾ ಅದಕ್ಕೊಂದು ಪ್ರಮಾಣ ಇದೆಯೇ?
ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಇದು ನೆರವಾಗುತ್ತದೆ. ಹೀಗಾಗಿ ದಿನದಲ್ಲಿ ಹಸಿವಾದಾಗ ಸಿಕ್ಕಿದ್ದನ್ನು ಬಾಯಿಗೆ ಹಾಕುವ ಬದಲು ಒಂದಿಷ್ಟು ಬಾದಾಮಿಗಳನ್ನು ಬಾಯಿಗೆ ಹಾಕಿಕೊಳ್ಳುವುದು ಎಲ್ಲಾ ಲೆಕ್ಕದಲ್ಲೂ ಸೂಕ್ತವಾದದ್ದು. ಹೆಚ್ಚಿನ ಬಾದಾಮಿಗಳ ಸೇವನೆಯಿಂದ ನಮ್ಮ ಜಠರದಲ್ಲಿ ಹೆಚ್ಚಾಗಿ ಉತ್ಪಾದನೆಯಾಗುವ ಬ್ಯೂಟರೇಟ್‌ನಿಂದ ದೇಹಕ್ಕೆ ಹಲವು ರೀತಿಯಲ್ಲಿ ಲಾಭವಿದೆ.
ಜೀರ್ಣಾಂಗದಿಂದ ನಮ್ಮ ರಕ್ತವನ್ನು ಪ್ರವೇಶಿಸುವ ಈ ರಾಸಾಯನಿಕದಿಂದ ಶ್ವಾಸಕೋಶ, ಯಕೃತ್ತು ಮತ್ತು ಮೆದುಳಿನ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಮಾತ್ರವಲ್ಲ ಹಾನಿಕಾರಕ ಬ್ಯಾಕ್ಟೀರಿಯಾಗಳು ನಮ್ಮ ಪರಿಚಲನಾ ವ್ಯವಸ್ಥೆ ಪ್ರವೇಶಿಸುವುದನ್ನು ತಡೆಯುವ ಬ್ಯೂಟರೇಟ್, ಹೊಟ್ಟೆಯ ಉರಿಯೂತವನ್ನೂ ಶಮನಗೊಳಿಸುತ್ತದೆ. ಬಾದಾಮಿಯಿಂದ ಚರ್ಮದ ಕಾಂತಿ ಹೆಚ್ಚುವುದಲ್ಲದೆ ಕೂದಲಿನ ಆರೋಗ್ಯವೂ ವೃದ್ಧಿಸುತ್ತದೆ.
ಎಷ್ಟು ಬೇಕು-ಸಾಕು?
ಸೇವಿಸಬೇಕಾದ ಬಾದಾಮಿಯ ಪ್ರಮಾಣ ನಿರ್ಧಾರವಾಗುವುದು ಆಯಾ ವ್ಯಕ್ತಿಗಳ ಆರೋಗ್ಯ ಸ್ಥಿತಿ, ಆಹಾರ ಪದ್ಧತಿ ಮತ್ತು ಪ್ರಾದೇಶಿಕ ಹವಾಮಾನಗಳ ಮೇಲೆ. ಚಳಿ ದೇಶಗಳಲ್ಲಿ ಸೇವಿಸುವಷ್ಟು ಬಾದಾಮಿಗಳ ಸೇವನೆ ಉಷ್ಣವಲಯದ ದೇಶಗಳಲ್ಲಿ ಅಗತ್ಯವಿಲ್ಲ. ಒಣ ಬಾದಾಮಿಗಳು ಭಾರತದಂಥ ಉಷ್ಣವಲಯದ ಹವಾಮಾನಗಳಲ್ಲಿ ದೇಹದ ಉಷ್ಣತೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಹಾಗಾಗಿ ಅವುಗಳನ್ನು ನೀರು ಅಥವಾ ಹಾಲಿನಲ್ಲಿ ರಾತ್ರಿಡೀ ನೆನೆಸಿ, ಬೆಳಗ್ಗೆ ಸೇವಿಸುವುದು ಕ್ಷೇಮ.
ಸಾಮಾನ್ಯ ವ್ಯಕ್ತಿಗೆ ಬೆಳಗಿನ ಉಪಾಹಾರದೊಂದಿಗೆ ನೆನೆಸಿದ ಹತ್ತು ಬಾದಾಮಿಗಳು ಸಾಕಾಗಬಹುದು. ಆದರೆ ಕಠಿಣ ದೇಹಶ್ರಮದ ಕೆಲಸ ಮಾಡುವ ಯುವಜನರಿಗೆ ೨೦ ಬಾದಾಮಿಗಳವರೆಗೂ ಬೇಕಾಗಬಹುದು. ಇನ್ನು ಬಕೆಟ್ಟುಗಟ್ಟಲೆ ಬೆವರು ಹರಿಸುವ ಅಥ್ಲೀಟ್‌ಗಳಿಗೆ ೩೦ ಸಹ ಹೆಚ್ಚನಿಸುವುದಿಲ್ಲ. ತಮಗೆಷ್ಟು ಬೇಕು ಎಂಬುದನ್ನು ಆಯಾ ವ್ಯಕ್ತಿಗಳೇ ನಿರ್ಧರಿಸಿಕೊಳ್ಳಬಹುದು.
ಪೌಷ್ಟಿಕಾಂಶಗಳು ಏನಿವೆ?
ವಿಟಮಿನ್ ಇ, ವಿಟಮಿನ್ ಬಿ೧, ಥಿಯಮಿನ್, ವಿಟಮಿನ್ ಬಿ೩, ಫೋಲೇಟ್, ವಿಟಮಿನ್ ಬಿ೯, ಪ್ರೊಟೀನ್, ನಾರು, ಮೆಗ್ನೀಶಿಯಂ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶಗಳು ಪ್ರಧಾನವಾಗಿವೆ. ಕೆಲವು ಸೂಕ್ಷ್ಮ ಪೋಷಕಾಂಶಗಳು ಸಹ ಇದರಿಂದ ದೊರೆಯುತ್ತವೆ. ಇದರಿಂದ ಮೂಳೆಗಳ ಸಾಂದ್ರತೆ ಬಲಗೊಳ್ಳುತ್ತದೆ. ಕೆಂಪು ರಕ್ತಕಣಗಳ ಸಂಖ್ಯೆ ವೃದ್ಧಿಗೊಳ್ಳುತ್ತದೆ, ಸ್ನಾಯುಗಳು ಸದೃಢವಾಗುತ್ತವೆ. ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು.
ಹೃದ್ರೋಗಿಗಳು ಮತ್ತು ಮಧುಮೇಹಿಗಳು ಸಹ ಸೇವಿಸಬಹುದಾದ ಆಹಾರವಿದಾಗಿದ್ದು, ಕೊಲೆಸ್ಟ್ರಾಲ್ ಮತ್ತು ರಕ್ತದ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ನೆರವಾಗುತ್ತದೆ. ಜೀರ್ಣಾಂಗದ ಕ್ಯಾನ್ಸರ್ ತಡೆಗಟ್ಟಲು ನೆರವಾಗುವ ಈ ಪುಟ್ಟ ಬೀಜಗಳು, ಅಲ್ಜೈಮರ್ಸ್ ಉಲ್ಭಣಿಸುವುದನ್ನು ತಡೆಯಲು ಸಹಕಾರಿ. ತೆಂಗಿನ ಹಾಲಿನಂತೆ ಬಾದಾಮಿಯ ಹಾಲು ಸಹ ಲಭ್ಯವಿದೆ. ಮಾತ್ರವಲ್ಲ, ಬಾದಾಮಿ ಎಣ್ಣೆ ಮತ್ತು ಪೀನಟ್ ಬಟರ್‌ನಂತೆ ಬಾದಾಮಿ ಬೆಣ್ಣೆ ಸಹ ದೊರೆಯುತ್ತವೆ.
Hot Water Benefits: ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಕುಡಿಯುತ್ತಿದ್ದೀರಾ? ಇದರಿಂದ ಏನಾಗುತ್ತೆ ನೋಡಿ!
ಹೆಚ್ಚಾದರೇನು?
ಇದರಲ್ಲಿ ಸತ್ವ ಮಾತ್ರವಲ್ಲ, ಕ್ಯಾಲರಿಯೂ ಹೆಚ್ಚು. ಹಾಗಾಗಿ ಅತಿಯಾಗಿ ತಿಂದರೆ ತೂಕ ಹೆಚ್ಚುವುದು ನಿಶ್ಚಿತ. ಅದರಲ್ಲೂ ಬಾದಾಮಿಯಲ್ಲಿ ಉತ್ತಮವಾದ ಕೊಬ್ಬಿನಂಶ ಹೇರಳವಾಗಿದೆ. ಹಾಗಾಗಿ ತಿಳಿದು ತಿನ್ನುವುದು ಒಳ್ಳೆಯದು.
ಈ ಬೀಜಗಳಲ್ಲಿ ನಾರು ವಿಫುಲವಾಗಿದೆ. ನಾರಿನಂಶ ಜೀರ್ಣಾಂಗಗಳಿಗೆ ಒಳ್ಳೆಯದೇ ಎನ್ನುವುದು ಹೌದಾದರೂ, ಅದನ್ನು ಅತಿಯಾಗಿ ತಿಂದರೆ ಹೊಟ್ಟೆ ಏರುಪೇರಾಗುತ್ತದೆ. ಆಗ ಸಾಕಷ್ಟು ನೀರು ಕುಡಿಯಬೇಕು. ಅದೂ ಕಡಿಮೆಯಾದರೆ ಹೊಟ್ಟೆ ಉಬ್ಬರಿಸಿ, ಅಜೀರ್ಣದ ಬಾಧೆ ಕಾಡುತ್ತದೆ. ಜೊತೆಗೆ, ಬಾದಾಮಿಯಲ್ಲಿರುವ ಆಕ್ಸಲೇಟ್ ಮತ್ತು ಫೈಟಿಕ್ ಆಮ್ಲದ ಅಂಶಗಳು ಎಲ್ಲರಿಗೆ ಅಲ್ಲದಿದ್ದರೂ, ಕೆಲವರಿಗೆ ತೊಂದರೆ ನೀಡಬಹುದು. ಹಾಗಾಗಿ ಬಾದಾಮಿ ಒಳ್ಳೆಯದಾದರೂ ಮಿತ ಸೇವನೆಯಲ್ಲಿ ಹಿತವಿದೆ.