Friday, 22nd November 2024

ಮೋದಿಯವರ ಭದ್ರತೆ ಲೋಪ: ಅರ್ಜಿ ವಿಚಾರಣೆ ಇಂದು

ನವದೆಹಲಿ: ಪಂಜಾಬ್​ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಭದ್ರತೆ ವಿಚಾರದಲ್ಲಿ ಲೋಪವಾ ಗಿರುವ ಕುರಿತಂತೆ ಸಲ್ಲಿಕೆ ಮಾಡಲಾಗಿದ್ದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಸುಪ್ರೀಂ ಕೋರ್ಟ್​​ ಕೈಗೆತ್ತಿ ಕೊಳ್ಳಲಿದೆ. ಲಾಯರ್ಸ್​​ ವಾಯ್ಸ್​​ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಯಲಿದೆ.

ಪಂಜಾಬ್​ನಲ್ಲಿ ನಡೆದ ಭದ್ರತಾ ಲೋಪದ ಘಟನೆ ಹಿನ್ನೆಲೆಯಲ್ಲಿ ಪ್ರಧಾನಿಗಳ ಭದ್ರತೆಯ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಇಂತಹ ಯಾವುದೇ ರೀತಿಯ ಲೋಪವಾಗದಂತೆ ಕ್ರಮಕೈಗೊಳ್ಳಲು ಕೋರಿ ಸುಪ್ರೀ ಕೋರ್ಟ್​​ಗೆ ಅರ್ಜಿ ಸಲ್ಲಿಕೆಯಾಗಿತ್ತು. ಹಿರಿಯ ವಕೀಲ ಮಣಿಂದರ್ ಸಿಂಗ್ ಅವರು ಪ್ರಧಾನಿಗಳ ಭದ್ರತೆ ವಿಚಾರದಲ್ಲಿ ಅತಿದೊಡ್ಡ ಲೋಪವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ವಕೀಲರ ಅರ್ಜಿಯನ್ನು ಸ್ವೀಕರಿಸಿದ ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ನೇತೃತ್ವದ ಪೀಠ ಅರ್ಜಿಯ ವಿಚಾರಣೆಗೆ ಸಮ್ಮತಿ ಸೂಚಿಸಿದ್ದಾರೆ. ಇನ್ನು ಈ ಮಹಾಪ್ರಮಾದದ ಕುರಿತಂತೆ ಈಗಾಗಲೇ ಪಂಜಾಬ್ ಸರ್ಕಾರದಿಂದ ಘಟನೆಯ ತನಿಖೆಗೆ ಸಮಿತಿ ರಚನೆ ಮಾಡಲಾಗಿದೆ. ನಿವೃತ್ತ ನ್ಯಾಯಮೂರ್ತಿ ಮೆಹ್ತಾಬ್ ಸಿಂಗ್ ಗಿಲ್ ನೇತೃತ್ವದ ಸಮಿತಿಯನ್ನು ರಚನೆ ಮಾಡಲಾಗಿದ್ದು, ಮೂರು ದಿನಗಳಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚನೆ ನೀಡಲಾಗಿದೆ.

ಘಟನೆ ಕುರಿತು ಭಾರತೀಯ ಕಿಸಾನ್ ಯೂನಿಯನ್ (ಕ್ರಾಂತಿಕಾರಿ) ಹೊಣೆ ಹೊತ್ತಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.