ಸುಲ್ತಾನ್ಪುರ: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ 2018ರ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೂನ್ 7ಕ್ಕೆ ನಿಗದಿಪಡಿಸಿದೆ.
ಬಿಜೆಪಿ ನಾಯಕ ವಿಜಯ್ ಮಿಶ್ರಾ ಅವರು ಗಾಂಧಿ ವಿರುದ್ಧ ಮಾನನಷ್ಟ ದೂರು ದಾಖಲಿಸಿದ್ದರು. ರಾಹುಲ್ ಗಾಂಧಿ ಪರ ವಕೀಲ ಕಾಶಿ ಪ್ರಸಾದ್ ಶುಕ್ಲಾ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಕಾಂಗ್ರೆಸ್ ನಾಯಕ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದಾರೆ ಮತ್ತು ನ್ಯಾಯಾಲಯಕ್ಕೆ ಹಾಜರಾಗಲು ಸಮಯ ಬೇಕು ಎಂದು ಮನವಿ ಮಾಡಿಕೊಂಡಿದ್ದರು. ಇದೀಗ ನ್ಯಾಯಾಮೂರ್ತಿ ಶುಭಂ ವರ್ಮಾ ಅವರು ಮುಂದಿನ ವಿಚಾರಣೆಯನ್ನು ಜೂನ್ 7 ಎಂದು ನಿಗದಿಪಡಿಸಿದ್ದಾರೆ.
ವಿಚಾರಣೆಗೆ ಹಾಜರಾಗದೆ, ರಾಹುಲ್ ಗಾಂಧಿ ನ್ಯಾಯಾಲಯದಿಂದ ಓಡಿ ಹೋಗುತ್ತಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ಸಂತೋಷ್ ಕುಮಾರ್ ಪಾಂಡೆ ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಕಳೆದ ಡಿಸೆಂಬರ್‌ನಲ್ಲಿ ನ್ಯಾಯಾಲಯ ಗಾಂಧಿ ವಿರುದ್ಧ ವಾರೆಂಟ್ ಹೊರಡಿಸಿತ್ತು. ತರುವಾಯ, ಕಾಂಗ್ರೆಸ್ ನಾಯಕ ಫೆಬ್ರವರಿ 20 ರಂದು ಅಮೇಥಿ ಯಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಸ್ಥಗಿತಗೊಳಿಸಿ, ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾ ವಿರುದ್ಧ ಆಕ್ಷೇಪಾರ್ಹ ಪದ ಬಳಿಸಿದ ಕಾರಣಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ಆಗಸ್ಟ್ 4, 2018 ರಂದು ಇಲ್ಲಿ ದೂರು ದಾಖಲಿಸಲಾಗಿದೆ.