ಚಂಬ: ಹಿಮಾಚಲ ಪ್ರದೇಶದ (Himachal Pradesh) ಚಂಬಾ (Chamba) ಜಿಲ್ಲೆಯಲ್ಲಿರುವ ಡಾಲ್ ಹೌಸಿಯಲ್ಲಿ (Dalhousie) ಹೃದಯ ವಿದ್ರಾವಕ ಘಟನೆಯೊಂದು (Heartbreaking Incident) ನಡೆದಿದೆ. ಡಿ.10ರಂದು ನಡೆದಿರುವ ಈ ದುರ್ಘಟನೆಯಲ್ಲಿ ಮೊಬೈಲ್ ಫೋನ್ ಸ್ಪೋಟಗೊಂಡು (mobile phone explosion) ಗಂಭೀರವಾಗಿ ಗಾಯಗೊಂಡ 20ನೇ ವಯಸ್ಸಿನ ಯುವತಿ ಮೃತಪಟ್ಟಿದ್ದಾಳೆ. ಇದು ಮೊಬೈಲ್ ಫೋನ್‌ಗಳ ಅತೀ ಬಳಕೆ ಮತ್ತು ಅವೈಜ್ಞಾನಿಕ ಬಳಕೆಯ ವಿಚಾರದಲ್ಲಿ ತೀವ್ರ ಕಳವಳನ್ನು ಮೂಡಿಸಿದೆ.
ಇಲ್ಲಿನ ಬಿಚುನಿ ಗ್ರಾಮದ (Bichuni village) ಕಿರಣ್ ಎಂಬ ಯುವತಿಯೇ ಮೊಬೈಲ್ ಸ್ಪೋಟಕ್ಕೆ ಬಲಿಯಾದವಳಾಗಿದ್ದಾಳೆ. ತನ್ನ ಮೊಬೈಲ್ ಫೋನನ್ನು ಚಾರ್ಚ್ ಗಿಟ್ಟ ಸಂದರ್ಭದಲ್ಲಿ ಅದನ್ನು ಬಳಸಿದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಲಭ್ಯ ಮಾಹಿತಿಗಳ ಪ್ರಕಾರ ಕಿರಣ್ ತನ್ನ ಮೊಬೈಲನ್ನು ಚಾರ್ಜಿಗಿರಿಸಿ ಬಳಿಕ ಅದರಲ್ಲಿ ಇಂಟರ್ನೆಟ್ ಸಂಪರ್ಕವನ್ನು ಆಕ್ಟಿವ್ ಗೊಳಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮೊಬೈಲ್ ಫೋನ್ ಇದ್ದಕ್ಕಿದ್ದಂತೆ ಸ್ಪೋಟಗೊಂಡಿದೆ ಎಂದು ತಿಳಿದುಬಂದಿದೆ. ಯುವತಿಯ ಕಿವಿಯ ಹತ್ತಿರವೇ ಈ ಸ್ಪೋಟ ಸಂಭವಿಸಿದ್ದು, ಆಕೆಯ ಮಿದುಳಿನ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾದ ಕಾರಣ ಆಕೆ ಸಾವನ್ನಪ್ಪಿದ್ದಾಳೆಂದು ತಿಳಿದುಬಂದಿದೆ.
ಮೊಬೈಲ್ ಸ್ಪೋಟದ ಸದ್ದು ಕೇಳಿ ಯುವತಿಯ ತಾಯಿ ಚಂಚಲ ಮಗಳ ಕೋಣೆಗೆ ಓಡಿ ಬಂದಾಗ, ಮಗಳು ಗಂಭೀರವಾಗಿ ಗಾಯಗೊಂಡು ಒದ್ದಾಡುತ್ತಿರುವುದು ಕಂಡಿದೆ. ಕೂಡಲೇ ಅಲ್ಲಿದ್ದವರು ಗಾಯಾಳು ಯುವತಿಯನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ನೇರವಾಗಿ ಆಕೆಯನ್ನು ಕಂಗ್ರಾದಲ್ಲಿರುವ (Kangra) ತಂಡಾ ವೈದ್ಯಕೀಯ ಕಾಲೇಜಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು.
ಅಲ್ಲಿ ಆಕೆಗೆ ತುರ್ತು ವೈದ್ಯಕಿಯ ನೆರವನ್ನು ಒದಗಿಸಲಾಯಿತಾದರೂ, ಗಂಭೀರವಾಗಿ ಗಾಯಗೊಂಡಿದ್ದ ಆಕೆ ಘಟನೆ ಸಂಭವಿಸಿದ ಒಂದು ವಾರದ ಬಳಿಕ, ಡಿ.15ರಂದು ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ. ಚಂಬಾ ವೈದ್ಯಕೀಯ ಕಾಲೇಜಿನ (Chamba Medical College) ಡಾ. ವಿಶಾಲ್ ಮಹಾಜನ್ ಈ ಘಟನೆ ನಡೆದಿರುವುದನ್ನು ದೃಢೀಕರಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಈ ಘಟನೆಯ ಬಗ್ಗೆ ಯಾವುದೇ ಮಾಹಿತಿ ನೀಡುವ ಸ್ಥಿತಿಯಲ್ಲಿರಲಿಲ್ಲ ಎಂದು ತಿಳಿದುಬಂದಿದೆ. ಹಾಗಾಗಿ ಈ ಸ್ಪೋಟದ ನಿಖರವಾದ ಕಾರಣ ತಿಳಿದುಬಂದಿಲ್ಲ. ಯುವತಿಯ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ತಂಡಾ ವೈದ್ಯಕೀಯ ಕಾಲೇಜಿನಲ್ಲಿ ನಡೆಸಲಾಗಿದೆ. ಬಳಿಕ ಕಿರಣ್ ಮೃತದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ.
ಇದನ್ನೂ ಓದಿ: Ashwini Puneeth Rajkumar: ಶಿಕ್ಷಣ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ ಅಶ್ವಿನಿ ಪುನೀತ್ ರಾಜ್‌ಕುಮಾರ್!
ದೇಶದ ಹಲವು ಕಡೆಗಳಲ್ಲಿ ಮೊಬೈಲ್ ಫೋನ್‌ಗಳು ಸ್ಪೋಟಗೊಳ್ಳುವ ಮತ್ತು ಇದರಿಂದ ಹಲವಾರು ಅವಘಡಗಳಾಗಿರುವ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಅವುಗಳಲ್ಲಿ ಇತ್ತೀಚೆಗೆ ನಡೆದಿರುವ ಕೆಲವೊಂದು ಘಟನೆಗಳನ್ನು ನೋಡುವುದಾದಲ್ಲಿ..:
ಡಿ.7ರಂದು ಬೈಕಿನಲ್ಲಿ ಹೋಗುತ್ತಿದ್ದ 55 ವರ್ಷದ ಶಾಲಾ ಪ್ರಿನ್ಸಿಪಾಲ್ ಒಬ್ಬರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಇದ್ದಕ್ಕಿದ್ದಂತೆ ಸ್ಪೋಟಗೊಂಡು ಅವರು ದಾರುಣವಾಗಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಸಂಗಡಿ ಎಂಬಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಸುರೇಶ್ ಸಂಗ್ರಾಮೆ ಎಂದು ಗುರುತಿಸಲಾಗಿದೆ.
ಇನ್ನೊಂದು ಘಟನೆಯಲ್ಲಿ, ವಂದೇ ಭಾರತ್ ರೈಲಿನಲ್ಲಿ ತನ್ನ ಫೋನನ್ನು ಚಾರ್ಜ್ ಗಿರಿಸಿದ್ದ ಎಸ್. ಖುಷಿನಾತ್ಕರ್ ಎಂಬವರ ಮೊಬೈಲ್ ಇದ್ದಕ್ಕಿದ್ದಂತೆ ಸ್ಪೋಟಗೊಂಡ ಘಟನೆ ಡಿ. 3ರಂದು ನಡೆದಿದೆ. ಅದೃಷ್ಟವಶಾತ್ ಖುಷಿನಾತ್ಕರ್ ಅವರು ಅಪಾಯಗಳಿಲ್ಲದೇ ಪಾರಾಗಿದ್ದಾರೆ. ಚೆನ್ನೈ-ಮೈಸೂರು ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ತಿರುಪಟ್ಟೂರು ರೈಲು ನಿಲ್ದಾಣದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಚಾರ್ಜ್ ಗೆಂದು ಇಟ್ಟಿದ್ದ ಮೊಬೈಲ್ ಫೋನ್ ಸ್ಪೋಟಗೊಂಡು 9 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯ ಚೌರಾರಿ ಪ್ರದೇಶದಲ್ಲಿ ನಡೆದಿದೆ.
ಈ ರೀತಿಯಾಗಿ ನಮ್ಮ ದೈನಂದಿನ ಜೀವನದ ಭಾಗವೇ ಆಗಿರುವ ಮೊಬೈಲ್ ಫೋನ್ ಗಳು ಅಲ್ಲಲ್ಲಿ ಸ್ಪೋಟಗೊಳ್ಳುತ್ತಿರುವ ಘಟನೆಗಳು ದಿನನಿತ್ಯವೆಂಬಂತೆ ವರದಿಯಾಗುತ್ತಿವೆ.