ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಚೆನ್ನೈ ನಗರ ಮತ್ತು ತಮಿಳುನಾಡಿನ ಉತ್ತರ ಭಾಗದ ಜಿಲ್ಲೆಗಳಲ್ಲಿ ಗುರುವಾರ ಭಾರಿ ಮಳೆ ಬೀಳುವ ಸಾಧ್ಯತೆ ಇದೆ.
ಕುಂಭದ್ರೋಣ ಮಳೆಯಿಂದ ತತ್ತರಿಸಿರುವ ಚೆನ್ನೈ ಜನರಿಗೆ ಆತಂಕ ತಂದಿದೆ. ಹವಾ ಮಾನ ಇಲಾಖೆ ಮತ್ತು ಸ್ವತಂತ್ರ ಹವಾಮಾನ ಬ್ಲಾಗರ್‌ಗಳು ರಾಜ್ಯದ ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ಚೆಂಗಲ್ಪಟ್ಟು, ಕಡಲೂರು ಜಿಲ್ಲೆಗಳು ಮತ್ತು ನೆರೆಯ ಪುದುಚೇರಿ ಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಬಹುತೇಕ ಭಾಗಗಳಲ್ಲಿ ಬುಧವಾರ ಲಘು ಮಳೆಯಾಗಿದೆ.
ಸ್ಥಳೀಯ ಪ್ರದೇಶಗಳು ಮತ್ತು ಸುರಂಗಮಾರ್ಗಗಳಿಂದ ಮಳೆ ನೀರನ್ನು ತಕ್ಷಣವೇ ಹರಿಸಲು 600ಕ್ಕೂ ಹೆಚ್ಚು ಮೋಟಾರ್ ಪಂಪ್‌ಗಳನ್ನು ಸಿದ್ಧಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರ ಒಂದೇ ವಾರದಲ್ಲಿ ನಗರದಲ್ಲಿ 40 ಸೆಂ.ಮೀ.ಗೂ ಹೆಚ್ಚು ಮಳೆಯಾಗಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುವ ರೆಡ್ ಹಿಲ್ಸ್, ಶೋಲಾವರಂ ಮತ್ತು ಚೆಂಬರಂಬಾಕ್ಕಂ ಎಂಬ ಮೂರು ಜಲಾಶಯಗಳು ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲು ಸಿದ್ಧವಾಗಿವೆ.
ಆಗ್ನೇಯ ಬಂಗಾಳ ಕೊಲ್ಲಿಯಲ್ಲಿನ ಕಡಿಮೆ ಒತ್ತಡದ ಪ್ರದೇಶವು ಈಗ ಆಗ್ನೇಯ ಮತ್ತು ಪಕ್ಕದ ನೈಋತ್ಯ ಬಂಗಾಳ ಕೊಲ್ಲಿಯ ಲ್ಲಿದೆ. ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 5.8 ಕಿಮೀ ವರೆಗೆ ವಿಸ್ತರಿಸಿದೆ ಎಂದು ಹವಾಮಾನ ಇಲಾಖೆ ಹೇಳಿದೆ.