Friday, 22nd November 2024

ಭಾರೀ ಮಳೆಗೆ ತಡೆಗೋಡೆ ಕುಸಿತ: ಏಳು ಮಂದಿ ಸಾವು

ಹೈದರಾಬಾದ್‌: ಬಾಚುಪಲ್ಲಿ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್‌ನ ತಡೆಗೋಡೆ ಕುಸಿದು ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರಲ್ಲಿ ನಾಲ್ಕು ವರ್ಷದ ಮಗು ಕೂಡ ಗೋಡೆ ಕೆಳಗೆ ಸಿಲುಕಿ ಮಲಗಿದಲ್ಲಿಯೇ ಕೊನೆಯುಸಿರೆಳೆದಿದೆ.

ವರುಣನ ಆರ್ಭಟಕ್ಕೆ ಬೆಳಗ್ಗೆಯೇ ದುರಂತ ಸಂಭವಿಸಿದ್ದು, ಏಳು ಮಂದಿ ಸಾವನ್ನಪ್ಪಿದ್ದಾರೆ.

ಮೃತರು ಒಡಿಶಾ ಮತ್ತು ಛತ್ತೀಸ್‌ಗಢಕ್ಕೆ ಸೇರಿದ ವಲಸೆ ಕಾರ್ಮಿಕರಾಗಿದ್ದು, ಅಪಾರ್ಟ್‌ಮೆಂಟ್‌ ನಿರ್ಮಾಣ ಕಾರ್ಯ ಮಾಡುತ್ತಿದ್ದರು. ಸದ್ಯ ಅಲ್ಲಿಯೇ ಕಾರ್ಮಿಕರು ವಾಸವಿದ್ದು, ಭಾರೀ ಮಳೆಗೆ ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್‌ನ ತಡೆಗೋಡೆ ಕುಸಿದಿದೆ ಎಂದು ವರದಿಯಾಗಿದೆ.

ಗೋಡೆ ಅಡಿ ಸಿಲುಕಿದ್ದ ಏಳು ಜನರ ಮೃತದೇಹಗಳನ್ನು ಸದ್ಯ ಹೊರ ತೆಗೆಯಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇನ್ನು ಭಾರೀ ಮಳೆಯಿಂದ ಹೈದರಾಬಾದ್‌ ನಗರದ ರಸ್ತೆಗಳಲ್ಲಿ ನೀರು ನಿಂತು ಟ್ರಾಫಿಕ್ ಜಾಮ್‌ ಆಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.

ನಿರಂತರ ಸುರಿಯು ತ್ತಿರುವ ಮಳೆಯಿಂದ ತೆಲಂಗಾಣ ನಿವಾಸಿಗಳ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಹೈದರಾಬಾದ್ ನಗರ ಮಳೆಯಿಂದ ನಗರ ತತ್ತರಿಸಿ ಹೋಗಿದೆ.