Saturday, 13th July 2024

ಮುಂಬೈ: ಮತ್ತೊಮ್ಮೆ ಹಿಜಾಬ್ ಜಗಳ ಆರಂಭ

ಮುಂಬೈ: ಮುಂಬೈನ ಚೆಂಬೂರ್‌ನಲ್ಲಿರುವ ಆಚಾರ್ಯ ಕಾಲೇಜಿನಲ್ಲಿ ಹಿಜಾಬ್‌ಗೆ ನಿಷೇಧ ಹೇರಲಾಗಿದ್ದು, ಇದರ ವಿರುದ್ಧ ಒಂಬತ್ತು ವಿದ್ಯಾರ್ಥಿನಿ ಯರು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಹಿಜಾಬ್ ಮೇಲಿನ ನಿಷೇಧ ತೆಗೆದುಹಾಕುವಂತೆ ವಿದ್ಯಾರ್ಥಿನಿಯರು ನ್ಯಾಯಾಲಯದಲ್ಲಿ ಮನವಿ ಮಾಡಿದ್ದು, ಇದರೊಂದಿಗೆ ಕಾಲೇಜು ಆಡಳಿತವು ಧರ್ಮದ ಆಧಾರದಲ್ಲಿ ಪಕ್ಷಪಾತ ಮಾಡುತ್ತಿದೆ ಎಂಬ ಆರೋಪವನ್ನೂ ವಿದ್ಯಾರ್ಥಿಗಳು ಮಾಡಿದ್ದಾರೆ.

ಮುಂಬೈನ ಎನ್‌ಜಿ ಆಚಾರ್ಯ ಮತ್ತು ಡಿಕೆ ಮರಾಠೆ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್‌ನ ಒಂಭತ್ತು ವಿದ್ಯಾರ್ಥಿನಿಯರು, ಕಾಲೇಜು ಆಡಳಿತವು ಇತ್ತೀಚೆಗೆ ಜಾರಿಗೆ ತಂದಿರುವ ಡ್ರೆಸ್ ಕೋಡ್ ಅನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. ಕಾಲೇಜು ನಿಷೇಧ ಹೇರಿರುವುದು ಸ್ವೇಚ್ಛಾಚಾರ’ ಎಂದು ವಿದ್ಯಾರ್ಥಿಗಳು ಮನವಿಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿನಿಯರು ಕ್ಯಾಂಪಸ್‌ನಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗಿದೆ. ಅರ್ಜಿದಾರ ವಿದ್ಯಾರ್ಥಿನಿಯರು ಹೊಸ ಡ್ರೆಸ್ ಕೋಡ್ ತಮ್ಮ ಖಾಸಗಿತನ, ಘನತೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಕಾಲೇಜಿನಲ್ಲಿ ಯಾರೂ ನಮಗೆ ಸಹಾಯ ಮಾಡಲಾರರು, ಹೀಗಾಗಿ ನಮಗೆ ಕಂಡಿದ್ದು ನ್ಯಾಯಾಲಯದ ದಾರಿ ಮಾತ್ರ ಎಂದು ಕಾಲೇಜು ವಿದ್ಯಾರ್ಥಿನಿ ಝೈನಾಬ್ ಚೌಧರಿ ಹೇಳಿದ್ದಾರೆ. ಜೊತೆಗೆ ನ್ಯಾಯಾಲಯದ ತೀರ್ಪು ನಮ್ಮ ಪರವಾಗಿ ಬರುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದಾರೆ.

ನಾವು ನೇರವಾಗಿ ಹೈಕೋರ್ಟ್ ಮೊರೆ ಹೋಗಿಲ್ಲ ಎಂದು ಬಿಎಸ್ಸಿ ವಿದ್ಯಾರ್ಥಿ ಖಾನ್ ಅಂಜೊನ್ ಹೇಳಿದ್ದು, ಈ ಹಿಂದೆ ನಾವು ಸಾಧ್ಯವಾದಷ್ಟು ಕಾಲೇಜು ಆಡಳಿತ ಮಂಡಳಿಯನ್ನು ಮನವೊಲಿಸಲು ಪ್ರಯತ್ನಿಸಿದ್ದೇವೆ, ನಮಗೆ ಯಾವುದೇ ಆಯ್ಕೆ ಸಿಗದಿದ್ದಾಗ, ನಾವು ಹೈಕೋರ್ಟ್ ಅನ್ನು ಸಂಪರ್ಕಿಸಿದ್ದೇವೆ. ನಮಗೆ ಹಿಜಾಬ್ ತೆಗೆಯುವುದು ಮಾಮೂಲಿ ವಿಷಯವಲ್ಲ. ಹೀಗಾಗಿ ಈ ವಿಚಾರವನ್ನು ನ್ಯಾಯಾಲಯದ ಮೊರೆ ಹೋಗುತ್ತಿದ್ದೇವೆ ಎಂದು ಹಿಜಾಬ್ ಪರ ವಿದ್ಯಾರ್ಥಿಗಳು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!