ಕೋಲ್ಕತ್ತಾ: ಇನ್ನೇನು ಕೆಲವೇ ದಿನಗಳಲ್ಲಿ ನವರಾತ್ರಿ ಆರಂಭವಾಗಲಿದೆ. ಇದಕ್ಕಾಗಿ ಎಲ್ಲೆಡೆ ಸಿದ್ಧತೆ ನಡೆಸಲಾಗುತ್ತಿದೆ. ಅದರಲ್ಲಿಯೂ ದುರ್ಗಾ ಪೂಜೆ ಬಹಳ ವಿಶೇಷವಾಗಿರುವ ಪಶ್ಚಿಮ ಬಂಗಾಳದಲ್ಲಿ ಹಬ್ಬದ ಸಂಭ್ರಮ ಶುರುವಾಗಿದೆ. ಈ ಮಧ್ಯೆ ಪ್ರಧಾನಿ ಶೇಕ್ ಹಸೀನಾ ಪಲಾನಯನಗೈದ ಬಳಿಕ ಬಾಂಗ್ಲಾದೇಶ (Bangladesh)ದಲ್ಲಿ ಅಧಿಕಾರಕ್ಕೆ ಬಂದ ಮಧ್ಯಂತರ ಸರ್ಕಾರ ದುರ್ಗಾ ಪೂಜೆಗೆ ಅಗತ್ಯವಾದ ಹಿಲ್ಸಾ ಮೀನಿನ (Hilsa Fish) ರಫ್ತಿಗೆ ನಿಷೇಧ ಹೇರಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇದು ಎರಡೂ ದೇಶಗಳ ಸಂಬಂಧದ ಮೇಲೆ ಪರಿಣಾಮ ಬೀರಲಿದೆ ಎನ್ನುವ ಮಾತು ಕೇಳಿ ಬಂದಿದ್ದು, ಇದೀಗ ಬಾಂಗ್ಲಾದೇಶ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಹಿಲ್ಸಾ ಮೀನಿನ ರಫ್ತು ನಿಷೇಧದ ಹಿಂದೆ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ಸ್ಥಳೀಯವಾಗಿ ಬೇಡಿಕೆ ಹೆಚ್ಚಿರುವುದರಿಂದ ತಾತ್ಕಾಲಿಕವಾಗಿ ರಫ್ತು ನಿಲ್ಲಿಸಿದ್ದೇವೆ. ಇದಕ್ಕಾಗಿ ಕ್ಷಮೆ ಕೋರುತ್ತೇವೆ ಎಂದಿದೆ.
ಆದಾಗ್ಯೂ ಭಾರತದಿಂದ ಮೊಟ್ಟೆಗಳನ್ನು ಆಮದು ಮಾಡಿಕೊಂಡ ನಂತರ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ಪ್ರತಿಕ್ರಿಯಿಸಿ, ಭಾರತಕ್ಕೆ ಹಿಂದಿನಂತೆಯೇ ಆಲೂಗಡ್ಡೆ ಮತ್ತು ಈರುಳ್ಳಿ ಸರಬರಾಜು ನಡೆಯಲಿದೆ ತಿಳಿಸಿದೆ. ಬಾಂಗ್ಲಾದೇಶದ ಮೀನುಗಾರಿಕೆ ಮತ್ತು ಜಾನುವಾರು ಸಚಿವಾಲಯದ ಸಲಹೆಗಾರರಾದ ಫರೀದಾ ಅಖ್ತರ್ ಈ ಬಗ್ಗೆ ಮಾತನಾಡಿ, ʼʼಸ್ಥಳೀಯವಾಗಿ ಬೇಡಿಕೆ ಹೆಚ್ಚಾಗಿರುವುದರಿಂದ ಪಶ್ಚಿಮ ಬಂಗಾಳಕ್ಕೆ ಹಿಲ್ಸಾ ಮೀನಿಗಳನ್ನು ರಫ್ತು ಮಾಡಲು ಸಾದ್ಯವಾಗುತ್ತಿಲ್ಲʼʼ ಎಂದು ತಿಳಿಸಿದ್ದಾರೆ. ಇದಕ್ಕಾಗಿ ಬಾಂಗ್ಲಾದೇಶ ಭಾರತದ ಕ್ಷಮೆ ಕೋರುವುದಾಗಿ ಹೇಳಿದ್ದಾರೆ.
ಮೊಟ್ಟೆ ರಫ್ತು ಅವ್ಯಾಹತ
ಬಾಂಗ್ಲಾದೇಶ ಹಿಲ್ಸಾ ಮೀನಿನ ರಫ್ತು ನಿಷೇಧಿಸಿದ್ದರೂ ಭಾರತ ಕೋಳಿ ಮೊಟ್ಟೆಗಳನ್ನು ಅಲ್ಲಿಗೆ ಸರಬರಾಜು ಮಾಡುವುದನ್ನು ಮುಂದುವರಿಸಿದೆ. ‘ಮಧ್ಯಮ ವರ್ಗದ ಪ್ರೋಟೀನ್’ ಎಂದು ಕರೆಯಲಾಗುವ ಮೊಟ್ಟೆಗಳನ್ನು ಅಲ್ಲಿ ಸುಮಾರು ಅರ್ಧದಷ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಆಲೂಗಡ್ಡೆ ಮತ್ತು ಈರುಳ್ಳಿ ರಫ್ತು ಎಂದಿನಂತೆ ನಡೆಯಲಿದೆ ಎಂದಿರುವ ಬಾಂಗ್ಲಾ ಸರ್ಕಾರ, ಹಿಲ್ಸಾ ಮೀನಿನಂತಹ ಸಣ್ಣ ವಿಷಯ ಭಾರತದೊಂದಿಗಿನ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ.
ಹಿಲ್ಸಾ ಮೀನಿನ ಪ್ರಾಧಾನ್ಯತೆ
ಬಾಂಗ್ಲಾದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಪ್ರತಿಯೊಂದು ಶುಭ ಕಾರ್ಯದಲ್ಲೂ ಹಿಲ್ಸಾ ಮೀನು ತನ್ನದೇ ಪ್ರಾಮುಖ್ಯತೆ ಪಡೆದುಕೊಂಡಿದೆ. ಹಿಲ್ಸಾ ಮೀನು ಇಲ್ಲದೆ ಯಾವುದೇ ಕಾರ್ಯ ನಡೆಯುವುದಿಲ್ಲ. ಶುಭ ದಿನಗಳಲ್ಲಿ ಮೀನುಗಳ ಮಾಡಿ ತಟ್ಟೆಯಲ್ಲಿ ಅಲಂಕರಿಸಿ ಇಡುವುದು ಗೌರವದ ಸಂಕೇತ ಎಂದು ನಂಬಲಾಗುತ್ತಿದೆ. ಹೀಗಾಗಿ ದುರ್ಗಾ ಪೂಜೆಯಲ್ಲಿ ಈ ಹಿಲ್ಸಾ ಮೀನು ಬಹುಮುಖ್ಯ ಎನಿಸಿಕೊಂಡಿದೆ. ಇದೇ ಕಾರಣಕ್ಕೆ ದುರ್ಗಾ ಪೂಜೆಯ ಸಂದರ್ಭ ಭಾರತದಿಂದ ರಫ್ತಿಗೆ ಬೇಡಿಕೆ ಹೆಚ್ಚಾಗುತ್ತದೆ.
ಹಿಲ್ಸಾ ಮೀನು ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲದೆ ದೆಹಲಿ, ಜಾರ್ಖಂಡ್, ಮುಂಬೈ, ಬೆಂಗಳೂರು ಮತ್ತು ಬಿಹಾರದ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಇವು ಹೆಚ್ಚಾಗಿ ಬಾಂಗ್ಲಾದಲ್ಲಿ ಹರಿಯುವ ಪದ್ಮಾ (ಗಂಗಾ) ನದಿಯಲ್ಲಿ ಕಂಡುಬರುತ್ತವೆ. ಅತೀ ರುಚಕ ಖಾದ್ಯಕ್ಕೆ ಇದು ಹೆಸರುವಾಸಿ.
ಈ ಸುದ್ದಿಯನ್ನೂ ಓದಿ: LIC: ರೈಲ್ವೆಯ ಐಆರ್‌ಸಿಟಿಸಿಯಲ್ಲಿ ಹೂಡಿಕೆ ಹೆಚ್ಚಿಸಿದ ಎಲ್‌ಐಸಿ