Wednesday, 20th November 2024

Hosur Crime: ಕೋರ್ಟ್‌ ಆವರಣದಲ್ಲಿ ವಕೀಲನ ಮೇಲೆ ಮಾರಣಾಂತಿಕ ಹಲ್ಲೆ-ಅಣ್ಣಾಮಲೈ ಕಿಡಿ!

Lawyer Brutally Attacked With Sickle In Court Premises-'Stalin Turned TN Into Lawless Jungle', Says BJP

ಹೊಸೂರು: ತಮಿಳುನಾಡಿನ ಹೊಸೂರಿನ (Hosur Crime) ಕೋರ್ಟ್‌ ಆವರಣದಲ್ಲಿ ವಕೀಲರೊಬ್ಬರ ಮೇಲೆ ವ್ಯಕ್ತಿಯೊಬ್ಬ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ ಅವರ ವಿರುದ್ಧ ಭಾರತೀಯ ಜನತಾ ಪಕ್ಷದ ನಾಯಕ ಅಣ್ಣಾಮಲೈ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾರಣಾಂತಿಕ ಹಲ್ಲೆಗೆ ಒಳಗಾದ ವಕೀಲ ಕಣ್ಣನ್‌ ಎಂದು ಗುರಿತಿಸಲಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಇವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಕೋರ್ಟ್‌ ಆವರಣದ ನೆಲದ ಮೇಲೆ ಮಲಗಿದ್ದ ವಕೀಲನ ಮುಖಕ್ಕೆ ವ್ಯಕ್ತಿ ಕುಡುಗೋಲಿನಿಂದ ಎರಡು-ಮೂರು ಬಾರಿ ದಾಳಿ ನಡೆಸಿರುವುದು ವಿಡಿಯೋದಲ್ಲಿ ಕಾಣುತ್ತಿದೆ. ಸುತ್ತು-ಮುತ್ತು ಜನರು ನಿಂತು ನೋಡುತ್ತಿದ್ದರೆ ವಿನಃ ಯಾರೂ ಕೂಡ ಆ ವ್ಯಕ್ತಿಯನ್ನು ತಡೆಯಲು ಪ್ರಯತ್ನ ನಡೆಸಲಿಲ್ಲ. ಘಟನೆ ನಡೆದಿದ್ದ ಸ್ಥಳದಲ್ಲಿ ರಕ್ತ ಕಲೆಗಳು ಕಂಡು ಬಂದಿವೆ.

ಹಿರಿಯ ವಕೀಲರಾದ ಸತ್ಯ ನಾರಾಯಣ್‌ ಅವರ ಜೊತೆಗೆ ಹಲ್ಲೆಗೆ ಒಳಗಾದ ಕಣ್ಣನ್‌ ಜೂನಿಯರ್‌ ವಕೀಲನಾಗಿ ಅಭ್ಯಾಸ ನಡೆಸುತ್ತಿದ್ದರು. ಇವರು ತನ್ನ ಸಹಾಯಕ ಹಾಗೂ ತರಬೇತುದಾರ ವಕೀಲ ಆನಂದಕುಮಾರ್ (39) ಜತೆ ಹಳೆಯ ದ್ವೇಷವನ್ನು ಹೊಂದಿದ್ದರು. ಈ ಕಾರಣದಿಂದಲೇ ಅವರ ಮೇಲೆ ಮಾರಣಾಂತಿಕ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.

ಸಿಎಂ ಸ್ಟಾಲಿನ್‌ ವಿರುದ್ಧ ಅಣ್ಣಾಮಲೈ ಕಿಡಿ

ಈ ಮಾರಣಾಂತಿಕ ಹಲ್ಲೆಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ತಮಿಳುನಾಡು ಬಿಜೆಪಿ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಪೊಲೀಸ್‌ ಅಧಿಕಾರಿ ಅಣ್ಣಾಮಲೈ ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ ಅವರ ವಿರುದ್ಧ ಕಿಡಿಕಾರಿದ್ದಾರೆ. ಇವರ ಸರ್ಕಾರದ ಅಡಿಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಹೊಸೂರಿನಲ್ಲಿ ಹಗಲು ವೇಳೆ ವಕೀಲರೊಬ್ಬರ ಮೇಲೆ ಮಾರಣಾಂತಿಕ ದಾಳಿ ನಡೆದಿದೆ. ಡಿಎಂಕೆ ಸರ್ಕಾರದ ಅಡಿಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಈ ಘಟನೆಯು ಪ್ರತಿಬಿಂಬಿಸುತ್ತಿದೆ. ತಮಿಳುನಾಡು ರಾಜ್ಯವನ್ನು ಕಾನೂನು ಬಾಹಿರಿ ಕಾಡನ್ನಾಗಿ ಮಾಡಿರುವ ಸಿಎಂ ಸ್ಟಾಲಿನ್‌ ಅವರಿಗೆ ನಾಚಿಕೆಯಾಗಬೇಕು. ಈ ಸರ್ಕಾರವು ಸಮಸ್ಯೆಗಳನ್ನು ಬೇರೆಡೆಗೆ ತಿರುಗಿಸುವ ಬದಲು ಸರಿಪಡಿಸಲು ಸ್ವಲ್ಪ ಪ್ರಯತ್ನ ಮಾಡಿದರೆ, ಇಂತಹ ಕಾನೂನುಬಾಹಿರತೆ ಘಟನೆಗಳನ್ನು ತಡೆಯಬಹುದು,” ಎಂದು ಅಣ್ಣಾ ಮಲೈ ತಮ್ಮ ಎಕ್ಸ್‌ ಖಾತೆಯಲ್ಲಿ ವಿಡಿಯೊ ಹಂಚಿಕೊಳ್ಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಲ್ಲೆ ಮಾಡಿದ್ದ ವ್ಯಕ್ತಿ ಆನಂದ್‌ ಕುಮಾರ್‌ ಹೊಸೂರ್‌ ಕೋರ್ಟ್‌ನಲ್ಲಿ ಶರಣಾಗಿದ್ದಾರೆಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಹಾಗೂ ಇವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆಯನ್ನು ನಡೆಸಲಿದ್ದಾರೆಂದು ತಿಳಿದುಬಂದಿದೆ.