Sunday, 15th December 2024

ಪತ್ನಿ ಮೇಲಿನ ಕೋಪದಿಂದ ಮನೆಗೆ ಬೆಂಕಿ ಹಚ್ಚಿದ….ಸುಟ್ಟೋಯ್ತು ಹತ್ತು ಮನೆ….

ಮುಂಬೈ; ತನ್ನ ಪತ್ನಿಯೊಂದಿಗೆ ಜಗಳವಾಡಿದ ಪತಿರಾಯ ಮನೆಗೆ ಬೆಂಕಿ ಹಚ್ಚಿದ ಪರಿಣಾಮ ಅಕ್ಕಪಕ್ಕದ 10 ಮನೆಗಳು ಸಹ ಸುಟ್ಟು ಕರಕಲಾಗಿವೆ. ಕೋಪಗೊಂಡ ನೆರೆಹೊರೆಯವರು ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಮಹಾರಾಷ್ಟ್ರದ ಸತಾರದ ಪಟಾನ್‌ನಲ್ಲಿರುವ ಮಜಗಾಂವ್ ಹಳ್ಳಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಪತ್ನಿ ಜೊತೆ ಜಗಳವಾಡಿದ ಪತಿ ಕೋಪಗೊಂಡು ಹಚ್ಚಿದ ಬೆಂಕಿ ಇಡೀ ಪ್ರದೇಶವೇ ಸುಟ್ಟು ಹೋಗುವಂತೆ ಮಾಡಿದೆ.

ಪತ್ನಿಯೊಂದಿಗೆ ಜಗಳವಾಡಿದ ಬಳಿಕ ಪತಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ವೇಗವಾಗಿ ಬೇರೆ ಪ್ರದೇಶಕ್ಕೂ ಹರಡಿಕೊಂಡಿದೆ.

ಸುಮಾರು 10 ಮನೆಗಳಿಗೆ ಬೆಂಕಿ ಆವರಿಸಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ತಕ್ಷಣ ಜನರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಘಟನೆಯಿಂದ ಕೋಪಗೊಂಡ ನೆರೆಹೊರೆಯವರು ಆ ವ್ಯಕ್ತಿಯನ್ನು ಥಳಿಸಿದರು, ಪೊಲೀಸರನ್ನು ಕರೆಸಿದರು. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಸಂಜಯ್ ಎಂದು ಗುರುತಿಸಲಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರೂ ಸಾವನ್ನಪ್ಪಿಲ್ಲ. ಅಪಾರ ಆಸ್ತಿ-ಪಾಸ್ತಿ ಸುಟ್ಟು ಇಡೀ ಪ್ರದೇಶದಲ್ಲಿ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.

ಪೊಲೀಸರು ಸಂಜಯ್‌ನನ್ನು ಬಂಧಿಸಿದ್ದಾರೆ. ಸಂಜಯ್ ಪತ್ನಿ ಕೌಟುಂಬಿಕ ದೌರ್ಜನ್ಯ ಮತ್ತು ಆತನ ವಿರುದ್ಧ ಹಲ್ಲೆ ಮಾಡಿರುವ ದೂರು ನೀಡಿದ್ದಾರೆ. ಪತ್ನಿ ಮತ್ತು ನೆರೆಹೊರೆಯವರ ದೂರಿನ ಆಧಾರದ ಮೇಲೆ ಪೊಲೀಸರು ಸಂಜಯ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.