Thursday, 19th September 2024

House collapsed: ಮೀರತ್‌ನಲ್ಲಿ ಬಹು ಅಂತಸ್ತಿನ ಕಟ್ಟಡ ಕುಸಿದು 3 ಮಂದಿ ಸಾವು; ಮುಂದುವರಿದ ಕಾರ್ಯಾಚರಣೆ

House collapsed

ಲಕ್ನೋ: ಉತ್ತರಪ್ರದೇಶ (Uttar Pradesh)ದ ಮೀರತ್‌(Meerut)ನಲ್ಲಿ ಬಹು ಅಂತಸ್ತಿನ ಕಟ್ಟಡವೊಂದು ಕುಸಿದು(House collapsed) ಬಿದ್ದಿದ್ದು, 3 ಮಂದಿ ಮೃತಪಟ್ಟಿದ್ದಾರೆ. ಸುಮಾರು 6 ಮಂದಿ ಇನ್ನೂ ಅವಶೇಷದಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಲೋಹಿಯನಗರದ ಪೊಲೀಸ್‌ ಠಾಣೆಯ ಬಳಿ ಶನಿವಾರ 3 ಅಂತಸ್ತಿನ ಕಟ್ಟಡ ಕುಸಿದು ಈ ದುರ್ಘಟನೆ ಸಂಭವಿಸಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ತಂಡಗಳು ಸ್ಥಳದಲ್ಲಿವೆ. ಈ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಜಿಲ್ಲಾ ಮ್ಯಾಜಿಸ್ಟ್ರೇಟ್‌ ದೀಪಕ್‌ ಮೀನಾ ಈ ಬಗ್ಗೆ ಮಾಹಿತಿ ನೀಡಿ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ 8 ಮಂದಿಯನ್ನು ಈಗಾಗಲೇ ರಕ್ಷಿಸಲಾಗಿದ್ದು, ಈ ಪೈಕಿ 3 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. “ಆರಂಭದಲ್ಲಿ 14 ಜನರು ಅವಶೇಷಗಳಡಿ ಸಿಕ್ಕಿಬಿದ್ದಿದ್ದರು. 8 ಮಂದಿಯನ್ನು ಹೊರಗೆ ಕರೆ ತರಲಾಗಿದ್ದು, ಈ ಪೈಕಿ ಮೂವರ ಮೃತಪಟ್ಟಿದ್ದಾರೆ. ಉಳಿದವರಿಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ತಂಡಗಳು ಸ್ಥಳದಲ್ಲಿವೆ. ಉಳಿದ 6 ಮಂದಿಯನ್ನು ರಕ್ಷಿಸುವುದು ನಮ್ಮ ಆದ್ಯತೆʼʼ ಎಂದು ಹೇಳಿದ್ದಾರೆ.

ಕಟ್ಟಡದ ಮಾಲೀಕನನ್ನು ನಾಫೋ ಅಲ್ಲಾವುದ್ದೀನ್ ಎಂದು ಗುರುತಿಸಲಾಗಿದೆ. ಆತ ಕಟ್ಟಡದಲ್ಲಿ ಹಾಲಿನ ವ್ಯಾಪಾರ ನಡೆಸುತ್ತಿದ್ದ. ಈತನಿಗೆ ಇಬ್ಬರು ಮಕ್ಕಳು ಅವರ ಪತ್ನಿಯರು ಹಾಗೂ ಮೊಮ್ಮಕ್ಕಳು ಇದ್ದಾರೆ. ಇನ್ನು ಮನೆಯ ಹಟ್ಟಿಯಲ್ಲಿ ಕಟ್ಟಿದ ಎರಡು ಎಮ್ಮೆಗಳು ಅವಶೇಷದಡಿಯಲ್ಲಿ ಸಿಲುಕಿವೆ ಎನ್ನಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲೂ ತಿಳಿಸಿದ್ದಾರೆ.

ಮೀರತ್ ವಿಭಾಗದ ಆಯುಕ್ತೆ ಸೆಲ್ವ ಕುಮಾರಿ ಜೆ., ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ಟಾಡಾ ಮತ್ತು ನಗರ ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ವಿಕ್ರಮ್ ಸಿಂಗ್ ಸ್ಥಳದಲ್ಲಿದ್ದಾರೆ.

50 ವರ್ಷ ಹಳೆಯ ಕಟ್ಟಡ

ಜಾಕಿರ್‌ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸುಮಾರು 50 ವರ್ಷ ಹಳೆಯ ಈ ಕಟ್ಟಡ ಇದ್ದಕ್ಕಿದ್ಧಂತೆ ಕುಸಿದು ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇನ್ನು ಇದೊಂದು ಅತ್ಯಂತ ಹೆಚ್ಚು ಜನ ನಿಬಿಡ ಪ್ರದೇಶವಾಗಿರುವುದರಿಂದ ಬುಲ್ಡೋಜರ್‌ಗಳು ಕೂಡ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗಿರಲಿಲ್ಲ.

ಈ ಸುದ್ದಿಯನ್ನೂ ಓದಿ: ಭೂಕುಸಿತದಿಂದ ಮನೆ ಕುಸಿತ: ಮಗು, ತಾಯಿ ಸೇರಿ ನಾಲ್ವರ ಸಾವು