Thursday, 19th September 2024

House collapsed: ಕುಸಿದ 3 ಅಂತಸ್ತಿನ ಕಟ್ಟಡ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

House collapsed

ನವದೆಹಲಿ: ಮಧ್ಯ ದಿಲ್ಲಿಯ ಕರೋಲ್ ಬಾಗ್ (Karol Bagh) ಪ್ರದೇಶದಲ್ಲಿ ಬುಧವಾರ (ಸೆಪ್ಟೆಂಬರ್‌ 18) 3 ಅಂತಸ್ತಿನ ಮನೆಯ ಒಂದು ಭಾಗ ಕುಸಿದಿದ್ದು, ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ (House collapsed). ಒಟ್ಟು ಐದು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಾವು ನೋವಿನ ಬಗ್ಗೆ ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ.

ಸೆಪ್ಟೆಂಬರ್ 13ರಂದು ಇಲ್ಲಿಗೆ ಸಮೀಪದ ಮಧ್ಯ ದಿಲ್ಲಿಯ ನಬಿ ಕರೀಮ್ ಪ್ರದೇಶದಲ್ಲಿ ದರ್ಗಾದ ಗೋಡೆ ಕುಸಿದು ಓರ್ವ ವ್ಯಕ್ತಿ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಮಾಸುವ ಮುನ್ನ ಕಟ್ಟಡವೊಂದು ಧರಾಶಾಯಿಯಾಗಿದೆ. ʼʼಕರೋಲ್ ಬಾಗ್‌ನ ಪ್ರಸಾದ್ ನಗರದಲ್ಲಿ ಮನೆ ಕುಸಿದಿರುವ ಬಗ್ಗೆ ಬೆಳಿಗ್ಗೆ 9.12ಕ್ಕೆ ಕರೆ ಬಂದಿತ್ತು. 5 ಅಗ್ನಿಶಾಮಕ ದಳದ ವಾಹನಗಳು ತಕ್ಷಣ ಸ್ಥಳಕ್ಕೆ ಧಾವಿಸಿವೆʼʼ ಎಂದು ದಿಲ್ಲಿ ಅಗ್ನಿಶಾಮಕ ಸೇವಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ʼʼಅವಶೇಷಗಳಡಿ 6 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆʼʼ ಎಂದು ದಿಲ್ಲಿ ಅಗ್ನಿಶಾಮಕ ದಳದ ನಿರ್ದೇಶಕ ಅತುಲ್‌ ಗರ್ಗ್‌ ಮಾಹಿತಿ ನೀಡಿದ್ದಾರೆ. ಸದ್ಯ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್‌ ಕಲ್ಪಿಸಿದ್ದಾರೆ. ʼʼಕಾರ್ಯಾಚರಣೆ ಪ್ರಗತಿಯಲ್ಲಿದೆ. ಹೆಚ್ಚಿನ ವಿವರಗಳನ್ನು ಶೀಘ್ರದಲ್ಲಿಯೇ ಹಂಚಿಕೊಳ್ಳಲಾಗುವುದುʼʼ ಎಂದು ಅವರು ವಿವರಿಸಿದ್ದಾರೆ.

ಮೀರತ್‌: ಬಹುಮಹಡಿ ಕಟ್ಟಡ ಕುಸಿದು 10 ಮಂದಿ ಸಾವು

ಸೆಪ್ಟೆಂಬರ್‌ 14ರಂದು ಉತ್ತರ ಪ್ರದೇಶದ ಮೀರತ್‌ನಲ್ಲಿ ಮೂರು ಅಂತಸ್ತಿನ ಮನೆ ಕುಸಿದು 10 ಮಂದಿ ಮೃತಪಟ್ಟಿದ್ದರು. ಘಟನೆಯಲ್ಲಿ 5 ಮಂದಿ ಗಾಯಗೊಂಡಿದ್ದರು. ಜಾಕಿರ್‌ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ನಿರಂತರವಾಗಿ ಸುರಿದ ಮಳೆಯಿಂದಾಗಿ ಸುಮಾರು 50 ವರ್ಷ ಹಳೆಯ ಈ ಕಟ್ಟಡ ಇದ್ದಕ್ಕಿದ್ಧಂತೆ ಕುಸಿದು ಬಿದ್ದಿತ್ತು. ಇದೊಂದು ಅತ್ಯಂತ ಹೆಚ್ಚು ಜನ ನಿಬಿಡ ಪ್ರದೇಶವಾಗಿರುವುದರಿಂದ ಬುಲ್ಡೋಜರ್‌ಗಳು ಕೂಡ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗಿರಲಿಲ್ಲ.

ಈ ಸುದ್ದಿಯನ್ನೂ ಓದಿ: House collapsed: ಮೀರತ್‌ ಬಹುಮಹಡಿ ಕಟ್ಟಡ ಕುಸಿತ ಪ್ರಕರಣ; ಮೃತರ ಸಂಖ್ಯೆ 10ಕ್ಕೆ ಏರಿಕೆ

Leave a Reply

Your email address will not be published. Required fields are marked *