Sunday, 15th December 2024

ಅತ್ಯಾಚಾರ ಪ್ರಕರಣ: ಆರೋಪಿ ಅಕ್ರಮ ಮನೆ ನೆಲಸಮ

ಭೋಪಾಲ್:‌ ಮಧ್ಯಪ್ರದೇಶದ ಗುನಾದಲ್ಲಿ ಯುವತಿಯೊಬ್ಬಳ ಮೇಲೆ 1 ತಿಂಗಳ ಕಾಲ ನಿರಂತರ ಅತ್ಯಾಚಾರ ಹಾಗೂ ಚಿತ್ರಹಿಂಸೆ ನೀಡಿದ್ದ ಆರೋಪಿಯ ಅಕ್ರಮವಾಗಿ ನಿರ್ಮಿಸಲಾಗಿದ್ದ ಮನೆಯ ಮೇಲೆ ಅಧಿಕಾರಿಗಳು ಬುಲ್ಡೋಜರ್‌ ಹತ್ತಿಸಿ ನೆಲಸಮ ಮಾಡಿದ್ದಾರೆ.

ಆರೋಪಿ ಅಯಾನ್ ಪಠಾಣ್ ತನ್ನ ನೆರೆಮನೆಯಲ್ಲಿ ವಾಸಿಸುತ್ತಿದ್ದ 23 ವರ್ಷದ ಯುವತಿಯನ್ನು ಒತ್ತೆಯಾಳಾಗಿಟ್ಟುಕೊಂಡು ನಿರಂತರ ಚಿತ್ರೆಹಿಂಸೆ ನೀಡಿದ್ದ.

ಕೂಲಿ ಕೆಲಸ ಮಾಡುತ್ತಿದ್ದ ಅಯಾನ್ ಸಂತ್ರಸ್ತ ಯುವತಿಯ ತಾಯಿಯ ಹೆಸರಿನಲ್ಲಿರುವ ಆಸ್ತಿಯ ಮೇಲೆ ಕಣ್ಣಿತ್ತು ಎನ್ನಲಾಗಿದೆ. ಆಕೆಯ ಆಸ್ತಿಯನ್ನು ತನ್ನ ಹೆಸರಿಗೆ ಬರೆಸುವಂತೆ ಯುವತಿಗೆ ಒತ್ತಾಯಿಸಿದ್ದ. ಇದನ್ನು ನಿರಾಕರಿಸಿದ್ದಕ್ಕೆ ಆತ ಯುವತಿಗೆ 1 ತಿಂಗಳಿಂದ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾನೆ.

ಯುವತಿಯನ್ನು ಆತ ಕೂಡಿ ಹಾಕಿ ತೀವ್ರವಾಗಿ ಥಳಿಸಿದ್ದ. ಬಾಯಿಗೆ ಗಮ್‌ ಹಚ್ಚಿ ಮುಚ್ಚಿಸುತ್ತಿದ್ದ ಮಾತ್ರವಲ್ಲದೇ ಅತ್ಯಾಚಾರ ಎಸಗಿದ್ದ. ಇದಾದ ಬಳಿಕ ಯುವತಿ ಏ.16 ರಂದು ಅಲ್ಲಿಂದ ಹೇಗೋ ತಪ್ಪಿಸಿಕೊಂಡು 5 ಕಿ.ಮೀ ದೂರದಲ್ಲಿದ್ದ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದಳು. ಆಕೆಯ ಸ್ಥಿತಿ ಕಂಡು ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ನಕಲಿ ದಾಖಲೆ ಬಳಸಿ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿರುವುದನ್ನು ಪತ್ತೆ ಹಚ್ಚಿದ್ದಾರೆ.