ಜೋನಾಯ್: ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಪಕ್ಷ ಎಐಯುಡಿಎಫ್ ಜತೆ ಮೈತ್ರಿ ಮಾಡಿಕೊಂಡಿದ್ದು, ಇದು ಅಸ್ಸಾಂನಲ್ಲಿ ಅಕ್ರಮ ಒಳನುಸುಳುವಿಕೆ ಹೆಚ್ಚಾಗಲು ಕಾರಣವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಚ್ಚರಿಸಿದ್ದಾರೆ.
ಅಭಿವೃದ್ಧಿಪಥದತ್ತ ಕೊಂಡೊಯ್ಯುತ್ತಿರುವ ರಾಜ್ಯದಲ್ಲಿ ಕಾಂಗ್ರೆಸ್ ಬದ್ರುದ್ದೀನ್ ಅಜ್ಮಲ್ ಜತೆ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿ ಸರ್ಕಾರ ರಚಿಸಿದರೆ ರಾಜ್ಯದಲ್ಲಿ ನುಸುಳುಕೋರರ ಸಂಖ್ಯೆ ಹೆಚ್ಚಾಗಲಿದೆ. ನಿಮಗೆ ಅಕ್ರಮವಾಗಿ ನುಸುಳುವವರನ್ನು ತಡೆಯಬೇಕೆ? ಎಂದು ಶಾ ಪ್ರಶ್ನಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಅಸ್ಸಾಂನಲ್ಲಿ ಶಾಂತಿ ಮತ್ತು ಅಭಿವೃದ್ಧಿಯ ಆಡಳಿತ ನೀಡಿದೆ ಎಂದು ಶಾ ಸೋಮವಾರ ಚುನಾವಣಾ ಪ್ರಚಾರ ಸಮಾರಂಭದಲ್ಲಿ ತಿಳಿಸಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಸ್ಸಾಂನಲ್ಲಿ ಪ್ರತಿಭಟನೆ, ಹಿಂಸಾಚಾರ, ಬಾಂಬ್ ಸ್ಫೋಟ, ಸಾವು ಮತ್ತು ಕರ್ಫ್ಯೂ ಸಾಮಾನ್ಯವಾಗಿತ್ತು. ರಾಹುಲ್ ಗಾಂಧಿ ಅಸ್ಸಾಂ ಜನರ ಅಸ್ಮಿತೆ ಮತ್ತು ಅನನ್ಯತೆಯನ್ನು ರಕ್ಷಿಸುವ ಬಗ್ಗೆ ಮಾತನಾಡುತ್ತಾರೆ. ಆದರೆ ಕಾಂಗ್ರೆಸ್ ಇದನ್ನು ಬದ್ರುದ್ದೀನ್ ಅಜ್ಮಲ್ ತೊಡೆ ಮೇಲೆ ಕುಳಿತು ಸಾಧಿಸುತ್ತದೆಯೇ? ಎಂದು ಪ್ರಶ್ನಿಸಿದರು.
ಬಿಜೆಪಿ ಸಬ್ ಕಾ ಸಾಥ್, ಸಬ್ ವಿಕಾಸ್ ನೀತಿಯಡಿ ಕಾರ್ಯನಿರ್ವಹಿಸುತ್ತಿದೆ ಎಂದರು.