ಹೈದರಾಬಾದ್: ತಿರುಪತಿಯ ಲಡ್ಡುವಿನಲ್ಲಿ ಗೋವು ಸೇರಿದಂತೆ ನಾನಾ ಪ್ರಾಣಿಗಳ ಕೊಬ್ಬಿನಾಂಶ ಪತ್ತೆಯಾಗಿರುವ ಹಿನ್ನೆಲೆಯಲ್ಲಿ (Tirupati Laddoos Row) ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ 11 ದಿನಗಳ ಪಶ್ಚಾತಾಪ ವೃತ ಆಚರಿಸಲು ಮುಂದಾಗಿದ್ದಾರೆ. ಘಟನೆ ಬಗ್ಗೆ ಪದೇ ಪದೆ ಆಘಾತ ವ್ಯಕ್ತಪಡಿಸುತ್ತಿರುವ ಅವರು ಇಂಥದ್ದೊಂದು ಪಾವಿತ್ರ್ಯ ಕೆಡಿಸುವ ಕೃತ್ಯ ಮಸೀದಿ ಅಥವಾ ಚರ್ಚ್ನಲ್ಲಿ ನಡೆದಿರುತ್ತಿದ್ದರೆ ಏನಾಗುತ್ತಿತ್ತು ಎಂದು ಪ್ರಶ್ನಿಸಿದ್ದಾರೆ.
ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಅಕ್ಟೋಬರ್ 1 ರವರೆಗೆ 11 ದಿನಗಳ ಕಠಿಣ ಪ್ರಾಯಶ್ಚಿತಕ್ಕೆ ಮುಂದಾಗಿದ್ದಾರೆ. ನಂತರ ಅವರು ತಿರುಮಲಕ್ಕೆ ಭೇಟಿ ನೀಡಿ ವೆಂಕಟೇಶ್ವರನ ಕ್ಷಮೆ ಕೋರಲಿದ್ದಾರೆ. ಈ ಹಿಂದೆ ಅವರು ಸನಾತನ ಧರ್ಮ ಪರಿರಕ್ಷಣ್ ಪರಿಷತ್ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಕೋರಿದ್ದರು.
ಇದೀಗ ವಿಷಯದ ಬಗ್ಗೆ ಮತ್ತೊಮ್ಮೆ ಮಾತನಾಡಿದ ಅವರು “ಚರ್ಚ್ ಅಥವಾ ಮಸೀದಿಯಲ್ಲಿ ಈ ರೀತಿಯ ಅಪವಿತ್ರತೆ ನಡೆದಿದ್ದರೆ. ದೇಶವು ಅಸ್ತವ್ಯಸ್ತವಾಗುತ್ತಿತ್ತು. ಇದು ವಿಶ್ವ ಮಟ್ಟದಲ್ಲಿ ಚರ್ಚೆ ಮತ್ತು ಜಾಗತಿಕವಾಗಿ ಸುದ್ದಿಯಾಗುತ್ತಿತ್ತು” ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಲಾಗಿದೆ. ನಾವು ಜಾತ್ಯತೀತರಾಗಿರುವುದರಿಂದ ನಾವು ಈ ವಿಷಯವನ್ನು ಎತ್ತಬಾರದು ಎಂದು ವಿರೋಧ ಪಕ್ಷದವರು ಹೇಳುತ್ತಾರೆ. ಹಿಂದೂಗಳಿಗೆ ಭಾವನೆಗಳಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Yogi Adityanath : ಹಳೆ ಪಾರ್ಟಿ ಕಾಂಗ್ರೆಸ್ ಬಾಬರಿ ಮಸೀದಿಯಷ್ಟು ಶಿಥಿಲಗೊಂಡಿದೆ ಎಂದು ಲೇವಡಿ ಮಾಡಿದ ಯೋಗಿ
ವೈಎಸ್ ಜಗನ್ಮೋಹನ್ ರೆಡ್ಡಿ ನೇತೃತ್ವದ ಹಿಂದಿನ ಸರ್ಕಾರದ ಆಡಳಿತದ ಅವಧಿಯಲ್ಲಿ ತಿರುಪತಿಯಿಂದ ಬಂದ ತುಪ್ಪದ ಮಾದರಿಗಳಲ್ಲಿ ಮೀನಿನ ಎಣ್ಣೆ, ಗೋಮಾಂಸ ಟಾಲೋ ಮತ್ತು ಹಂದಿಮಾಂಸದ ಅಂಶಗಳು ಇದ್ದವು ಎಂದು ಗುಜರಾತ್ನ ಸರ್ಕಾರಿ ಪ್ರಯೋಗಾಲಯದಿಂದ ವರದಿಯನ್ನು ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಕಳೆದ ವಾರ ಬಿಡುಗಡೆ ಮಾಡಿದ್ದರು. ಅಲ್ಲಿಂದ ವಿವಾದ ದೊಡ್ಡದಾಗಿ ಬೆಳೆದಿದೆ.