Thursday, 12th December 2024

ಒಂದು ಹಂತದ ಮಧ್ಯಂತರ ಸೆಮಿಸ್ಟರ್​ ಪರೀಕ್ಷೆ ರದ್ದು: ರಂಗನ್ ಬ್ಯಾನರ್ಜಿ

ನವದೆಹಲಿ: ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯು ವಿದ್ಯಾರ್ಥಿಗಳಿಗೆ ಒತ್ತಡವನ್ನು ಕಡಿಮೆ ಮಾಡಲು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ತನ್ನ ಮೌಲ್ಯಮಾಪನ ವ್ಯವಸ್ಥೆಯನ್ನು ಪರಿಷ್ಕರಿಸಿರುವ ಐಐಟಿ ಆಡಳಿತ ಮಂಡಳಿ, ವಿದ್ಯಾರ್ಥಿಗಳ ಹಿತದೃಷ್ಟಿ ಯಿಂದ ಮಧ್ಯಂತರ ಸೆಮಿಸ್ಟರ್​ ಪರೀಕ್ಷೆಗಳನ್ನು ಕೈಬಿಟ್ಟಿದೆ. ಈ ವಿಷಯವನ್ನು ಸಂಸ್ಥೆಯ ನಿರ್ದೇಶಕ ರಂಗನ್ ಬ್ಯಾನರ್ಜಿ ತಿಳಿಸಿದರು.

ದೇಶಾದ್ಯಂತ ಇರುವ ಐಐಟಿಗಳಲ್ಲಿ ಇತ್ತೀಚೆಗೆ ನಿರಂತರವಾಗಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ಈ ಬೆಳವಣಿಗೆ ಪಠ್ಯಕ್ರಮ ಮತ್ತು ಕಠಿಣ ಅಧ್ಯಯನ ವೇಳಾಪಟ್ಟಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

ಈ ಬೆನ್ನಲ್ಲೇ ದೆಹಲಿ ಐಐಟಿ ಒಂದು ಹಂತದ ಮಧ್ಯಂತರ ಸೆಮಿಸ್ಟರ್​ ಪರೀಕ್ಷೆಗಳನ್ನು ರದ್ದು ಮಾಡಲು ತೀರ್ಮಾನಿಸಿದೆ.

“ಈ ಮೊದಲು ಒಂದು ಸೆಮಿಸ್ಟರ್‌ನಲ್ಲಿ ಎರಡು ಸೆಟ್‌ಗಳ ಪರೀಕ್ಷೆಗಳನ್ನು ಹೊಂದಿದ್ದೆವು. ಪ್ರತಿ ಸೆಮಿಸ್ಟರ್‌ನ ಕೊನೆಯಲ್ಲಿ ಅಂತಿಮ ಪರೀಕ್ಷೆಗಳು ನಡೆಯುತ್ತಿದ್ದವು. ಹಲವಾರು ನಿರಂತರವಾದ ಮೌಲ್ಯಮಾಪನ ಕಾರ್ಯವಿಧಾನಗಳನ್ನು ಹೊಂದಿದ್ದೇವು. ಇದೀಗ ಎರಡು ಸೆಟ್​ಗಳ ಪೈಕಿ ಒಂದು ಸೆಟ್ ಪರೀಕ್ಷೆ ಸೆಮಿಸ್ಟರ್​ಗಳನ್ನು ಕೈಬಿಡುವ ನಿರ್ಧಾರ ಕೈಗೊಂಡಿದ್ದೇವೆ” ಎಂದು ರಂಗನ್ ಬ್ಯಾನರ್ಜಿ ಮಾಹಿತಿ ನೀಡಿದರು.

“ನಾವು ಆಂತರಿಕ ಸಮೀಕ್ಷೆ ನಡೆಸಿದ್ದೇವೆ. ಎಲ್ಲ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಪ್ರತಿಕ್ರಿಯೆಗಳನ್ನು ಆಧರಿಸಿ ಒಂದು ಸೆಟ್ ಪರೀಕ್ಷೆಗಳನ್ನು ಕೈಬಿಡಲು ತೀರ್ಮಾನಿಸಿದ್ದೇವೆ. ಪರೀಕ್ಷಾ ಕ್ಯಾಲೆಂಡರ್ ಹೆಚ್ಚಿಗೆ ಇದೆ ಎಂದೂ ನಾವು ಭಾವಿಸಿದ್ದೇವೆ. ಹೀಗಾಗಿ ವಿದ್ಯಾರ್ಥಿಗಳ ಹೊರೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ನಿರ್ಧರಿಸಿದ್ದೇವೆ” ಎಂದು ವಿವರಿಸಿದರು.

”ನಮ್ಮ ನಿರ್ಧಾರವನ್ನು ಸೆನೆಟ್ ಅನುಮೋದಿಸಿದೆ. ಪ್ರಸ್ತುತ ನಡೆಯುತ್ತಿರುವ ಸೆಮಿಸ್ಟರ್‌ನಿಂದಲೇ ಜಾರಿಗೊಳಿಸಲಾಗುವುದು. ಎರಡು ಪರೀಕ್ಷೆಗಳಿಗೆ ಗರಿಷ್ಠ ಶೇ.80 ವೇಟೇಜ್ ​ನಿಗದಿಪಡಿಸಿದ್ದೇವೆ” ಎಂದು ರಂಗನ್​ ಹೇಳಿದರು.

ಕಳೆದ ಐದು ವರ್ಷಗಳಲ್ಲಿ ಐಐಟಿಗಳಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದೆ.