Thursday, 12th December 2024

ನಾಲ್ಕು ವರ್ಷಗಳ ಬಳಿಕ ಐಐಟಿಗಳಲ್ಲಿ ಮಹಿಳಾ ಕೋಟಾ ಫುಲ್‌

ಮುಂಬೈ: ದೇಶದ ಅತ್ಯುನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಗಳೆನಿಸಿದ ಐಐಟಿಗಳಲ್ಲಿ ಮಹಿಳಾ ಮೀಸಲಾತಿ ನಿಗದಿಪಡಿಸಿದ ನಾಲ್ಕು ವರ್ಷಗಳ ಬಳಿಕ ಬಹುತೇಕ ಎಲ್ಲ ಕ್ಯಾಂಪಸ್‍ಗಳಲ್ಲಿ 2021-22ನೇ ಶೈಕ್ಷಣಿಕ ವರ್ಷದಲ್ಲಿ ಶೇ.20ರಷ್ಟು ವಿದ್ಯಾರ್ಥಿನಿ ಯರು ಇದ್ದಾರೆ.

ಒಟ್ಟು 2990 ವಿದ್ಯಾರ್ಥಿನಿಯರು ಐಐಟಿಗಳಲ್ಲಿ ಪ್ರವೇಶ ಪಡೆದಿದ್ದಾರೆ. ಇದು ಮೀಸಲಾತಿ ಆರಂಭಿಸುವ ಹಿಂದಿನ ವರ್ಷ (2017) ಕ್ಕೆ ಹೋಲಿಸಿದರೆ ಮೂರು ಪಟ್ಟು ಅಧಿಕ. ಮಹಿಳಾ ಮೀಸಲಾತಿ ಸೀಟು ಆರಂಭಿಸುವ ಮುನ್ನ 995 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದರು.

2017ರಲ್ಲಿ ಮುಂಬೈ ಐಐಟಿಯಲ್ಲಿ 100 ವಿದ್ಯಾರ್ಥಿನಿಯರು ಪ್ರವೇಶ ಪಡೆದಿ ದ್ದರೆ, ಈ ಬಾರಿ 271ಕ್ಕೇರಿದೆ. ದೆಹಲಿ ಐಐಟಿಯಲ್ಲಿ ವಿದ್ಯಾರ್ಥಿನಿಯರ ಪ್ರವೇಶ ಸಂಖ್ಯೆ 90 ರಿಂದ 246ಕ್ಕೇರಿದೆ ಎನ್ನುವುದು 2021ರ ಪ್ರವೇಶಕ್ಕೆ ಸಂಬಂಧಿಸಿದ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

2017 ಮತ್ತು 2021ರ ನಡುವೆ ಐಐಟಿಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆ ವಾರ್ಷಿಕ 10988 ರಿಂದ 16296ಕ್ಕೇರಿದೆ. ವಿದ್ಯಾರ್ಥಿನಿಯರ ಸಂಖ್ಯೆ ಮೂರು ಪಟ್ಟು ಹೆಚ್ಚಿದ್ದು, 995ರಿಂದ 2990ಕ್ಕೇರಿದೆ.

ಐಐಟಿಗೆ ಈ ವರ್ಷ ಹೊಸಬರಿಗೆ ಪ್ರವೇಶ ಮುಕ್ತವಾಗಿಸಿದ ಬಳಿಕ ತಿರುಪತಿ ಐಐಟಿಯಲ್ಲಿ ಅತ್ಯುತ್ತಮ ಪುರುಷ- ಮಹಿಳೆ ಅನುಪಾತವಿದೆ.