ಕೆನಡಾ ಮತ್ತು ಭಾರತದ ನಡುವೆ ಹೆಚ್ಚು ಉದ್ವಿಗ್ನತೆ (India Canada row) ಸೃಷ್ಟಿಸಿದ ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತೀಯ ರಾಯಭಾರಿಗಳನ್ನು (Indian diplomats) ಕೆನಡಾ ಸರ್ಕಾರ (canada govt) ‘ಹಿತಾಸಕ್ತಿಯ ವ್ಯಕ್ತಿಗಳು’ (persons of interest) ಎಂದು ಅಪಮಾನಿಸಿದೆ. ಈ ಕಾರಣದಿಂದ ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಾಗಿದೆ.
ಕೆನಡಾ ಮತ್ತು ಭಾರತದ ನಡುವಿನ ಸಂಬಂಧ ಹದಗೆಡುತ್ತಿರುವ ಹಿಂದೆ ಹಲವು ಕಾರಣಗಳಿವೆ. ಕೆಲವು ಸಮಸ್ಯೆಗಳು ಈ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಈಗಾಗಲೇ ಭಾರತ ಕೆನಡಾದಿಂದ ತನ್ನ ಹೈಕಮಿಷನರ್ ಮತ್ತು ಇತರ ರಾಜತಾಂತ್ರಿಕರು ಮತ್ತು ಅಧಿಕಾರಿಗಳನ್ನು ವಾಪಸ್ ಕರೆಸಿದ್ದು, ದೇಶದಿಂದ ಕೆನಡಾ ಅಧಿಕಾರಿಗಳನ್ನು ನಿರ್ಗಮಿಸುವಂತೆ ಹೇಳಿದೆ. ಇದೆಲ್ಲವೂ ಪ್ರಾರಂಭವಾಗಿದ್ದು 1980ರ ದಶಕದ ಬಳಿಕ.
ಖಲಿಸ್ತಾನಿ ಚಳವಳಿ
1980ರ ದಶಕದಲ್ಲಿ ಭಾರತದ ಪಂಜಾಬ್ ಪ್ರದೇಶದಲ್ಲಿ ಖಲಿಸ್ತಾನ್ ಚಳುವಳಿ ಪ್ರಾರಂಭವಾಯಿತು. ಖಲಿಸ್ತಾನ್ ಎಂಬ ಸ್ವತಂತ್ರ ಸಿಖ್ ರಾಜ್ಯವನ್ನು ಪ್ರತ್ಯೇಕ ದೇಶವೆಂದು ಪರಿಗಣಿಸಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು. ಆದರೆ ಇದಕ್ಕೆ ಭಾರತ ಸರ್ಕಾರದಿಂದ ವಿರೋಧ ಎದುರಾಯಿತು. ಬಳಿಕ ಚಳುವಳಿಯು ನಿಧಾನವಾಗಿ ಕಡಿಮೆಯಾಯಿತು. ಭಾರತದಲ್ಲಿ ಬೆಂಬಲ ಸಿಗದೇ ಇದ್ದುದರಿಂದ ಸಿಖ್ ವಲಸಿಗರು ಹೆಚ್ಚಾಗಿರುವ ಕೆನಡಾದಲ್ಲಿ ಇದು ಇನ್ನೂ ಮುಂದುವರಿದಿದೆ.
ಸಿಖ್ಖರು ಕೆನಡಾದ ಪ್ರಮುಖ ವೋಟ್ ಬ್ಯಾಂಕ್
ಕೆನಡಾದಲ್ಲಿ ಸಿಖ್ಖ್ ಸಮುದಾಯ ಒಟ್ಟು ಜನಸಂಖ್ಯೆಯ ಶೇ. 1.5 ರಷ್ಟಿದ್ದಾರೆ. ಹೆಚ್ಚಾಗಿ ಇವರು ಟೊರೊಂಟೊ, ಕ್ಯಾಲ್ಗರಿ ಮತ್ತು ವ್ಯಾಂಕೋವರ್‌ನಲ್ಲಿ ವಾಸವಾಗಿದ್ದಾರೆ. ಕೆನಡಾದ ರಾಜಕೀಯದಲ್ಲಿ ಸಿಖ್ಖ್ ಸಮುದಾಯವು ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ.
ಭಾರತದೊಂದಿಗೆ ಜಸ್ಟಿನ್ ಟ್ರುಡೊ ಸಂಬಂಧ
2015ರ ನವೆಂಬರ್ ನಲ್ಲಿ ಕೆನಡಾದ ಪ್ರಧಾನಿಯಾದ ಜಸ್ಟಿನ್ ಟ್ರುಡೊ ಅವರಿಗೆ ಸಿಖ್ ನಾಯಕರು, ವಲಸಿಗರ ಬೆಂಬಲವಿದೆ. ಆದರೆ ಅವರ ಸರ್ಕಾರವು ಖಲಿಸ್ತಾನ್ ಚಳುವಳಿಗೆ ಸಂಬಂಧಿಸಿ ಕೆನಡಾದ ವ್ಯವಹಾರಗಳಲ್ಲಿ ಭಾರತ ಹಸ್ತಕ್ಷೇಪ ಮಾಡುತ್ತಿದೆ ಎನ್ನುವ ಆರೋಪ ಮಾಡುತ್ತಿರುವುದರಿಂದ ಭಾರತದೊಂದಿಗೆ ಸಂಬಂಧ ಹದಗೆಡಲು ಕಾರಣವಾಗಿದೆ. ಮೋದಿ ಸರ್ಕಾರದ ರೈತ ಕಾನೂನುಗಳ ವಿರುದ್ಧ ಭಾರತೀಯ ರೈತರ ಪ್ರತಿಭಟನೆಗಳ ಬಗ್ಗೆ 2020ರಲ್ಲಿ ಟ್ರೂಡೊ ನೀಡಿರುವ ಹೇಳಿಕೆಗಳು ಎರಡು ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಡಲು ಕಾರಣವಾಯಿತು.
ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ
ಪ್ರಮುಖ ಸಿಖ್ಖ್ ಕಾರ್ಯಕರ್ತ, ಖಲಿಸ್ತಾನಿ ಪರವಾಗಿದ್ದ ಹರ್ದೀಪ್ ಸಿಂಗ್ ನಿಜ್ಜರ್ ಭಾರತೀಯ ಮೂಲದ ಕೆನಡಾದ ಪ್ರಜೆಯಾಗಿದ್ದರು. 2023ರ ಜೂನ್ ನಲ್ಲಿ ಅವರನ್ನು ಬ್ರಿಟಿಷ್ ಕೊಲಂಬಿಯಾದಲ್ಲಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೆ ಪ್ರತಿಕ್ರಿಯೆ ನೀಡುವಾಗ ಟ್ರೂಡೊ ಈ ಪ್ರಕರಣದಲ್ಲಿ ಭಾರತ ಸರ್ಕಾರ ಭಾಗಿಯಾಗಿದೆ ಎಂದು ಆರೋಪಿಸಿದ್ದರು.
ಇತ್ತೀಚೆಗೆ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ರಾಯಭಾರಿಗಳನ್ನು ಕೆನಡಾ ಸರ್ಕಾರ ‘ಹಿತಾಸಕ್ತಿಯ ವ್ಯಕ್ತಿಗಳು’ ಎಂದು ಹೇಳಿರುವುದು ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಕೆನಡಾದಲ್ಲಿ ಭಾರತದ ಹೈ ಕಮಿಷನರ್ ಆಗಿರುವ ಸಂಜಯ್ ಕುಮಾರ್ ವರ್ಮಾ ಎರಡು ದೇಶಗಳ ನಡುವೆ ಹದಗೆಟ್ಟಿರುವ ಸಂಬಂಧವನ್ನು ಸರಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಭಾರತದ ಪ್ರತಿಕ್ರಿಯೆ
ಕೆನಡಾದ ಆರೋಪಗಳಿಗೆ ಭಾರತವು ತಿರುಗೇಟು ನೀಡುತ್ತಿದೆ. ಟ್ರುಡೊ ಅವರ ಸರ್ಕಾರವು ಮತ ಬ್ಯಾಂಕ್ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿದೆ.
India Canada Row : ಬಿಗಡಾಯಿಸಿದ ಭಾರತ- ಕೆನಡಾ ಸಂಬಂಧ ; ಭಾರತದ ರಾಜತಾಂತ್ರಿಕರನ್ನು ವಾಪಸಾಗಲು ಸೂಚನೆ
2023ರ ಸೆಪ್ಟೆಂಬರ್ ನಿಂದ ಟ್ರುಡೊ ಅವರ ಸರ್ಕಾರವು ಮಾಡಿರುವ ಆರೋಪಗಳಿಗೆ ಯಾವುದೇ ಸಾಕ್ಷಿಗಳನ್ನು ಒದಗಿಸಿಲ್ಲ ಎಂದು ಭಾರತ ಹೇಳಿದೆ. ವಿಶ್ವದ ಎಲ್ಲ ರಾಷ್ಟ್ರಗಳೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿರುವ ಭಾರತವು ಕೆನಡಾಕ್ಕೆ ನೀಡಿರುವ ಪ್ರತಿಕ್ರಿಯೆಯನ್ನು ಈ ಹಿಂದೆ ಪಾಕಿಸ್ತಾನಕ್ಕೆ ಮಾತ್ರ ನೀಡಿತ್ತು.
ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳಲ್ಲಿ ಇತ್ತೀಚಿನ ಬೆಳವಣಿಗೆಗಳು ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನತೆಗಳನ್ನು ಹೆಚ್ಚಿಸುತ್ತಿವೆ. ಮುಂದೆ ಇದು ಯಾವ ರೀತಿಯಲ್ಲಿ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.