Friday, 22nd November 2024

India-Canada Row: ಕೆನಾಡದಲ್ಲಿ ವಿಧ್ವಂಸಕ ಕೃತ್ಯದ ಹಿಂದೆ ಪ್ರಧಾನಿ ಮೋದಿ, ಜೈಶಂಕರ್‌, ದೋವಲ್‌ ಕೈವಾಡ ಇಲ್ಲ ಎಂದ ಟ್ರುಡೊ ಸರ್ಕಾರ

canada row

ಕೆನಡಾ: ಕೆಲವು ದಿನಗಳ ಹಿಂದೆ ತನ್ನ ನೆಲದಲ್ಲಿ ಭಾರತ ವಿಧ್ವಂಸಕ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ಕೆನಡಾ ಆರೋಪ ಮಾಡುತ್ತಲೇ ಬರುತ್ತಿದೆ(India-Canada row). ಸಾಲದೆನ್ನುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amit Shah) ವಿರುದ್ಧವೂ ಹಿಂಸಾಚಾರಕ್ಕೆ ಪ್ರಚೋದನೆ ಕೊಡುತ್ತಿರುವ ಬಗ್ಗೆ ಆರೋಪ ಹೊರಿಸಿತ್ತು. ಆದರೆ ಇದೀಗ ಕೆನಡಾದ ಜಸ್ಟಿನ್‌ ಟ್ರುಡೊ ಸರ್ಕಾರ ಈ ಬಗ್ಗೆ ಮತ್ತೊಂದು ಹೇಳಿಕೆ ನೀಡಿದೆ. ಕೆನಡಾದ ಅಪರಾಧ ಚಟುವಟಿಕೆಗಳಿಗೂ ಭಾರತದ ಪ್ರಧಾನಿ ನರೇಂದ್ರ ಮೋದಿ(Narendra Modi), ವಿದೇಶಾಂಗ ಸಚಿವೆ ಎಸ್ ಜೈಶಂಕರ್(S Jaishankar) ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಸಂಬಂಧ ಇಲ್ಲ ಎಂದು ಟ್ರುಡೊ ಸರ್ಕಾರ ಒಪ್ಪಿಕೊಂಡಿದೆ.

ಕೆನಡಾದ ಪ್ರಧಾನಿಯ ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ಸಲಹೆಗಾರರ ನಥಾಲಿ ಜಿ ಡ್ರೊಯಿನ್ ಈ ಹೇಳಿಕೆ ನೀಡಿದ್ದು, “ಕೆನಡಾದೊಳಗಿನ ಗಂಭೀರ ಅಪರಾಧ ಚಟುವಟಿಕೆಗಳಲ್ಲಿ ಪ್ರಧಾನಿ ಮೋದಿ, ಸಚಿವ ಜೈಶಂಕರ್ ಅಥವಾ ಎನ್‌ಎಸ್‌ಎ ದೋವಲ್ ಅವರ ಕೈವಾಡ ಇದೆ ಎಂದು ಕೆನಡಾ ಸರ್ಕಾರವು ಹೇಳಿಲ್ಲ ಅಥವಾ ಆ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳೂ ದೊರೆತಿಲ್ಲ ಎಂದು ತಿಳಿಸಿದ್ದಾರೆ.

ಖಲಿಸ್ತಾನಿ ಉಗ್ರ ಭಯೋತ್ಪಾದಕ ಹರ್ದೀಪ್ ನಿಜ್ಜರ್ ಹತ್ಯೆ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಎಸ್ ಜೈಶಂಕರ್ ಮತ್ತು ಅಜಿತ್‌ಗೆ ದೋವಲ್‌ ಸಂಬಂಧ ಕಲ್ಪಿಸಲು ಯತ್ನಿಸಿದ ಕೆನಡಾ ಮೂಲದ ಗ್ಲೋಬ್ ಅಂಡ್ ಮೇಲ್ ಪತ್ರಿಕೆಯ ವರದಿಯನ್ನು ಭಾರತವು ನವೆಂಬರ್ 20 ರಂದು ಬಲವಾಗಿ ನಿರಾಕರಿಸಿದ ನಂತರ ಕೆನಡಾ ಸರ್ಕಾರದಿಂದ ಈ ಹೇಳಿಕೆ ಬಂದಿದೆ.

ಅಮಿತ್‌ ಶಾ ವಿರುದ್ಧ ಆರೋಪ ಹೊರಿಸಿದ್ದ ಕೆನಡಾ

ಕೆನಡಾದಲ್ಲಿರುವ ಸಿಖ್‌ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ಕೈಗೊಳ್ಳಲು, ಬೆದರಿಕೆ ಹಾಕಲು ಮತ್ತು ಗುಪ್ತಚರ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಅಮಿತ್‌ ಶಾ ಆದೇಶಿಸಿದ್ದರು ಎಂದು ಕೆನಡಾದ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಡೇವಿಡ್‌ ಮಾರಿಸನ್‌ ಆರೋಪಿಸಿದ್ದರು. ಅವರು, ಸಂಸತ್‌ ಸದಸ್ಯರನ್ನು ಒಳಗೊಂಡ ರಾಷ್ಟ್ರೀಯ ಭದ್ರತಾ ಸಮಿತಿಗೆ ಮಾಹಿತಿ ನೀಡಿದ್ದು, ಈ ವಿಷಯದ ಕುರಿತ ಆರೋಪಗಳ ವರದಿಯನ್ನು ಮೊದಲ ಬಾರಿಗೆ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆ ಪ್ರಕಟಿಸಿತ್ತು. ಆ ಪತ್ರಿಕೆಯ ವರದಿಗಾರನಿಗೆ ಈ ವಿಷಯವನ್ನು ನಾನೇ ಖಚಿತಪಡಿಸಿದ್ದೆ’ ಎಂದು ಮಾರಿಸನ್‌ ಹೇಳಿದ್ದರು. ವರದಿಗಾರ ಕರೆ ಮಾಡಿ ಅದು ಆ ವ್ಯಕ್ತಿಯೇ ಎಂದು ಕೇಳಿದ್ದ ನಾನು ಹೌದು ಅದೇ ವ್ಯಕ್ತಿ ಎಂದು ಹೇಳಿದ್ದೇನೆ ಎಂದು ಅವರು ಹೇಳಿದ್ದಾರೆ. ಈ ಹೇಳಿಕೆಯನ್ನು ಭಾರತ ಬಲವಾಗಿ ಖಂಡಿಸಿತ್ತು.

ಭಾರತ-ಕೆನಡಾ ಬಿಕ್ಕಟ್ಟು

ಕೆನಡಾ ಹಾಗೂ ಭಾರತದ ರಾಜತಾಂತ್ರಿಕ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿದೆ. 2023ರ ಜೂನ್‌ನಲ್ಲಿ ನಡೆದ ಖಲಿಸ್ತಾನಿ ಉಗ್ರ ಹಾಗೂ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್‌ನ ಕೊಲೆ ಪ್ರಕರಣದ ಬಳಿಕ ಶುರುವಾದ ಬಿಕ್ಕಟ್ಟು, ಈಗ ರಾಯಭಾರ ಅಧಿಕಾರಿಗಳನ್ನು ವಜಾಗೊಳಿಸುವ ಪ್ರತೀಕಾರದ ಹಂತಕ್ಕೆ ತಲುಪಿದೆ. ನಿಜ್ಜಾರ್ ಹತ್ಯೆಯಲ್ಲಿ ಒಟ್ಟಾವದಲ್ಲಿನ ರಾಯಭಾರಿ ಸಂಜಯ್ ಕುಮಾರ್ ವರ್ಮಾ ಅವರ ಪಾತ್ರವಿದೆ. ಹೀಗಾಗಿ ಅವರನ್ನು ತನಿಖೆಗೆ ಒಳಪಡಿಸಬೇಕು ಎಂಬ ಕೆನಡಾ ಆರೋಪ ಹೊಸ ಸಂಘರ್ಷಕ್ಕೆ ನಾಂದಿ ಹಾಡಿತ್ತು. ಅದಕ್ಕೆ ತಕ್ಕ ತಿರುಗೇಟು ನೀಡಿದ ಭಾರತ ಸರ್ಕಾರ ಹಂಗಾಮಿ ಹೈಕಮಿನಷರ್ ಸೇರಿದಂತೆ ಕೆನಡಾದ ಆರು ರಾಜತಾಂತ್ರಿಕರನ್ನು ವಜಾಗೊಳಿಸಿ, ಶನಿವಾರದ ಒಳಗೆ ಜಾಗ ಖಾಲಿ ಮಾಡುವಂತೆ ಗಡುವು ನೀಡಿತ್ತು. ಇದೀಗ ದ್ವಿಪಕ್ಷೀಯ ರಾಜತಾಂತ್ರಿಕ ಸಭೆ ನಡೆದಿದ್ದು ಕೆನಡಾ ಸರ್ಕಾರಕ್ಕೆ ಭಾರತ ಕೊನೆಯ ಎಚ್ಚರಿಕೆ ನೀಡಿದೆ.

ಈ ಸುದ್ದಿಯನ್ನೂ ಓದಿ: Amit Shah: ಅಮಿತ್‌ ಶಾ ವಿರುದ್ಧದ ಕೆನಡಾ ಆರೋಪಕ್ಕೆ ಭಾರತ ಖಂಡನೆ; ಸಾಕ್ಷ್ಯಾಧಾರ ಇದ್ರೆ ಮಾತ್ರ ಮಾತನಾಡಿ ಎಂದು ಖಡಕ್‌ ಎಚ್ಚರಿಕೆ