Saturday, 14th December 2024

India China Border: ಜೈಶಂಕರ್, ಅಜಿತ್‌ ದೋವಲ್‌ ಸಂಧಾನ ಯಶಸ್ವಿ, ಗಲ್ವಾನ್ ಸೇರಿದಂತೆ 4 ಸ್ಥಳಗಳಿಂದ ಚೀನಾ ಪಡೆ ಹಿಂದಕ್ಕೆ

ajit doval india china border row

ನವದೆಹಲಿ: ಭಾರತ-ಚೀನಾ ಗಡಿ (India China Border Row) ಪ್ರದೇಶಗಳ ಬಿಕ್ಕಟ್ಟಿನ ಕುರಿತು ಚೀನಾ ಜೊತೆಗೆ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ (S Jaishankar) ಹಾಗೂ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ (NSA Ajit Doval) ನಡೆಸಿರುವ ಸಂಧಾನ ಯಶಸ್ವಿಯಾಗಿದೆ. ಗಡಿ ವಿವಾದ ಶೇ.75 ಭಾಗ ಬಗೆಹರಿದಿದೆ ಎಂದು ಜೈಶಂಕರ್‌ ಹೇಳಿದ್ದರೆ, 4 ಕಡೆಗಳಿಂದ ನಾವು ಹಿಂತೆಗೆದುಕೊಂಡಿದ್ದೇವೆ ಎಂದು ಚೀನಾ ಹೇಳಿದೆ.

2020ರಲ್ಲಿ ಭಾರಿ ಚಕಮಕಿ ಹಾಗೂ 20 ಭಾರತೀಯ ಯೋಧರ ಸಾವಿಗೆ ಕಾರಣವಾಗಿದ್ದ ಗಲ್ವಾನ್ ಕಣಿವೆಯಿಂದ (Galwan Valley) ಚೀನಾ ಸೈನಿಕರು ಹಿಂದೆ ಸರಿದಿದ್ದಾರೆ. ಗಲ್ವಾನ್‌ ಸೇರಿದಂತೆ ಪೂರ್ವ ಲಡಾಖ್‌ನ ನಾಲ್ಕು ಕಡೆಗಳಿಂದ ನಮ್ಮ ಸೈನಿಕರು ನಿರ್ಗಮಿಸಿದ್ದಾರೆ ಮತ್ತು ಗಡಿ ಪರಿಸ್ಥಿತಿ ಸ್ಥಿರವಾಗಿದೆ. ಹಾಗೂ ಉಭಯ ದೇಶಗಳ ನಡುವಿನ ಸಂಬಂಧ ಉತ್ತಮಗೊಂಡಿದೆ ಎಂದು ಚೀನಾ ಶುಕ್ರವಾರ ಹೇಳಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್, ದ್ವಿಪಕ್ಷೀಯ ಬಾಂಧವ್ಯವನ್ನು ಸುಧಾರಿಸಲು ಎರಡೂ ರಾಷ್ಟ್ರಗಳು ಕೆಲಸ ಮಾಡಬೇಕಿದೆ ಎಂದು ರಷ್ಯಾದಲ್ಲಿ ನಡೆದ ಸಭೆಯಲ್ಲಿ ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ ಎಂದು ಹೇಳಿದರು.

ಸೆಪ್ಟೆಂಬರ್ 12ರಂದು ಚೀನಾ ವಿದೇಶಾಂಗ ಸಚಿವಾಲಯದ ನಿರ್ದೇಶಕ ವಾಂಗ್ ಯಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಸೇಂಟ್ ಪೀಟರ್ಸ್ಬರ್ಗ್​​ನಲ್ಲಿ ಭೇಟಿಯಾದರು. ಈ ಸಭೆಯಲ್ಲಿ ಎರಡು ರಾಷ್ಟ್ರಗಳ ನಡುವೆ ಇರುವ ಗಡಿ ಭದ್ರತಾ ವಿಚಾರವಾಗಿ ಚರ್ಚೆ ನಡೆಸಲಾಗಿದೆ. ಮಾತುಕತೆಯಲ್ಲಿ ಎರಡೂ ದೇಶಗಳು ಉತ್ತಮ ಪ್ರಗತಿಯನ್ನು ಸಾಧಿಸಿವೆ. ಉಭಯ ದೇಶಗಳ ನಾಯಕರ ನಡುವೆ ಪರಸ್ಪರ ತಿಳುವಳಿಕೆ ಮತ್ತು ವಿಶ್ವಾಸವನ್ನು ಹೆಚ್ಚಿಸಲು ಹಾಗೂ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸಲು ಈ ಮಾತುಕತೆ ನಡೆದಿದೆ ಎಂದು ಹೇಳಿದ್ದಾರೆ.

ನಾಲ್ಕು ಜಾಗಗಳು ವಿವಾದವನ್ನು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಗಲ್ವಾನ್ ಕಣಿವೆ ಸೇರಿದಂತೆ ಚೀನಾ-ಭಾರತದ ಗಡಿಯ ಪಶ್ಚಿಮ ವಲಯದ ನಾಲ್ಕು ಪ್ರದೇಶಗಳಲ್ಲಿ ಉಭಯ ದೇಶಗಳು ತಮ್ಮ ಸೇನೆಯನ್ನು ಹಿಂದಕ್ಕೆ ತೆಗೆದುಕೊಂಡಿವೆ. ಚೀನಾ-ಭಾರತ ಗಡಿ ಪರಿಸ್ಥಿತಿ ಸ್ಥಿರವಾಗಿದೆ ಮತ್ತು ನಿಯಂತ್ರಣದಲ್ಲಿದೆ ಎಂದು ವಾಂಗ್‌ ಹೇಳಿದ್ದಾರೆ.

ಇದಕ್ಕೆ ಒಂದು ದಿನದ ಮೊದಲು ಹೇಳಿಕೆ ನೀಡಿದ್ದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಚೀನಾದೊಂದಿಗಿನ ಸರಿಸುಮಾರು 75 ಪ್ರತಿಶತದಷ್ಟು ಭೂವಿವಾದ ಸಮಸ್ಯೆಗಳು ಬಗೆಹರಿದಿವೆ. ಆದರೆ ಗಡಿಯಲ್ಲಿ ಹೆಚ್ಚುತ್ತಿರುವ ಮಿಲಿಟರೀಕರಣವು ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ್ದರು.

ಜಿನೀವಾದಲ್ಲಿ ನಡೆದ ಅಧಿವೇಶನದಲ್ಲಿ ಭಾಗವಹಿಸಿದ ಸಚಿವ ಎಸ್ ಜೈಶಂಕರ್, ಜೂನ್ 2020ರ ಗಲ್ವಾನ್ ಕಣಿವೆಯ ಘರ್ಷಣೆ ಭಾರತ-ಚೀನಾ ಬಾಂಧವ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡಿದೆ. ಇದನ್ನು ಬಿಟ್ಟು ಬಾಕಿ ಉಳಿದಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಭಾರತ ಮತ್ತು ಚೀನಾ 2020ರಿಂದ ಮಾತುಕತೆಯಲ್ಲಿ ತೊಡಗಿವೆ. ಸುಮಾರು 75 ಪ್ರತಿಶತದಷ್ಟು ವಿವಾದಗಳು ಇತ್ಯರ್ಥವಾಗಿವೆ ಎಂದಿದ್ದಾರೆ.

ಗುರುವಾರ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್ (ಬ್ರೆಜಿಲ್-ರಷ್ಯಾ-ಭಾರತ-ಚೀನಾ-ದಕ್ಷಿಣ ಆಫ್ರಿಕಾ) ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ​​ಸಮಾವೇಶದಲ್ಲಿ NSA ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಈಗಾಗಲೇ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳ ಪರಿಣಾಮವಾಗಿ ಉಭಯ ರಾಷ್ಟ್ರಗಳು ಘರ್ಷಣೆ ಸ್ಥಳಗಳಾದ ಪಾಂಗಾಂಗ್ ಸರೋವರ, ಗೋಗ್ರಾ ಮತ್ತು ಹಾಟ್ ಸ್ಪ್ರಿಂಗ್‌ನ ಉತ್ತರ ಮತ್ತು ದಕ್ಷಿಣ ದಂಡೆಗಳಿಂದ ಸೈನ್ಯವನ್ನು ಹಿಂತೆಗೆದುಕೊಂಡಿವೆ. ಗಡಿಯಲ್ಲಿ ಶಾಂತಿ ನೆಲೆಸದಿದ್ದರೆ ಚೀನಾ ಜತೆಗಿನ ಬಾಂಧವ್ಯ ಸಾಮಾನ್ಯವಾಗಿರಲು ಸಾಧ್ಯವಿಲ್ಲ ಎಂದು ಭಾರತ ಹೇಳಿತ್ತು.

ಇದನ್ನೂ ಓದಿ: Chinese Dish: ಚೀನಾದಲ್ಲಿ ಮಕ್ಕಳ ಮೂತ್ರಕ್ಕೆ ಭಾರೀ ಬೇಡಿಕೆ; ಇದರಿಂದ ತಯಾರಿಸುತ್ತಾರೆ ವಿಶೇಷ ಖಾದ್ಯ!