Friday, 22nd November 2024

India-China Border: ಭಾರತ ಚೀನಾ ನಡುವೆ ಗಡಿ ಗಸ್ತು ಒಪ್ಪಂದ ಏಕೆ ಮುಖ್ಯ?

India-China Border

ಗಲ್ವಾನ್ ಕಣಿವೆಯಲ್ಲಿ(Galwan Valley) 2020ರಲ್ಲಿ ನಡೆದ ಘರ್ಷಣೆಯ ಬಳಿಕ ಇದೀಗ ಭಾರತ ಮತ್ತು ಚೀನಾ ಗಡಿ ರೇಖೆಯ (India-China Border) ಉದ್ದಕ್ಕೂ ಗಸ್ತು ಒಪ್ಪಂದ (Border Patrol Agreement) ಪುನರ್ ಸ್ಥಾಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಕುರಿತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸ್ಪಷ್ಟನೆ ನೀಡಿದ್ದು, ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಕಡಿಮೆ ಮಾಡಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ಗಡಿ ಗಸ್ತು ಒಪ್ಪಂದ ಯಾಕೆ?

ಭಾರತ ಮತ್ತು ಚೀನಾ ನಡುವಿನ ಗಡಿ ಗಸ್ತು ಒಪ್ಪಂದದ ಹಿಂದೆ ಸಂಘರ್ಷದ ಸಂಭಾವ್ಯತೆ ಕಡಿಮೆ ಮಾಡುವ ಉದ್ದೇಶವಿದೆ. ಇದಕ್ಕಾಗಿ ಈಗಾಗಲೇ ಎರಡೂ ದೇಶಗಳು ನಿಯೋಜಿಸಿರುವ ಸಾವಿರಾರು ಸೈನಿಕರನ್ನು ಹಿಂತೆಗೆದುಕೊಂಡು ಯುದ್ಧ ಸನ್ನಿವೇಶ ಅಥವಾ ಆತಂಕ ಕಡಿಮೆ ಮಾಡಲಾಗುತ್ತದೆ. ಈ ಮೂಲಕ 2020ರಲ್ಲಿ ಇದ್ದ ಗಸ್ತು ನಿಯಮ ಮರಳಿ ಸ್ಥಾಪಿಸಲಾಗುತ್ತದೆ.

ಡೆಪ್ಸಾಂಗ್ ಬಯಲು ಪ್ರದೇಶ ಮತ್ತು ಡೆಮ್‌ಚೋಕ್ ಪ್ರದೇಶದಲ್ಲಿ ಪ್ರತಿಯೊಬ್ಬರಿಗೂ ಗಸ್ತು ತಿರುಗುವ ಹಕ್ಕುಗಳನ್ನು ಪುನಃಸ್ಥಾಪಿಸಲಾಗುತ್ತದೆ. ಇದು ಪರಿಸ್ಥಿತಿ ನಿಯಂತ್ರಿಸಲು ಸಹಾಯ ಮಾಡುತ್ತದೆ. ಗಡಿ ಸಮಸ್ಯೆಗಳ ಕುರಿತು ಮಾತುಕತೆಗೆ ಉತ್ತಮ ವಾತಾವರಣ ಕಲ್ಪಿಸುತ್ತದೆ. 2020ರ ಹಿಂದಿನ ನಿಯಮದಂತೆ ಗಸ್ತು ಪುನರಾರಂಭವು ಎರಡು ರಾಷ್ಟ್ರಗಳ ನಡುವೆ ವಿಶ್ವಾಸ ಮತ್ತೆ ಸ್ಥಾಪಿಸಲು ಸಹಾಯ ಮಾಡುತ್ತದೆ. ಉದ್ವಿಗ್ನತೆ ಕಡಿಮೆ ಮಾಡಿ ಮುಂದಿನ ಸಂವಾದಕ್ಕೂ ದಾರಿ ಮಾಡಿಕೊಡುತ್ತದೆ.

India-China Border

ರಾಜಕೀಯ ಪರಿಣಾಮ

ಭಾರತ ಚೀನಾ ನಡುವೆ ಗಡಿ ಗಸ್ತು ಒಪ್ಪಂದದಿಂದಾಗಿ ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆಗಳಿಗೆ ಅನುಕೂಲವಾಗಲಿದೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನಾಯಕರ ನಡುವಿನ ಸಭೆಗಳು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಬಹುದು. ಯಾವುದೇ ಆತಂಕವಿಲ್ಲದೆ ಭಾರತವು ಗಡಿ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಗಮನ ಹರಿಸಬಹುದು. ಭಾರತದೊಂದಿಗೆ ತನ್ನ ಗಡಿಗಳನ್ನು ಅಭಿವೃದ್ಧಿ ಪಡಿಸಲು ಚೀನಾ ಕೂಡ ಗಮನ ಹರಿಸಬಹುದು.

ಗಾಲ್ವಾನ್ ಘರ್ಷಣೆಯಲ್ಲಿ ಏನಾಗಿತ್ತು?

2020 ಜೂನ್ 15ರಂದು ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ವ್ಯಾಪಿಸಿರುವ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾ ಸೈನಿಕರು ಬಂದೂಕುಗಳನ್ನು ಬಿಟ್ಟು ಕೋಲು, ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದರು. 1975ರ ಬಳಿಕ ನಡೆದ ಮೊದಲ ಮಾರಣಾಂತಿಕ ಘರ್ಷಣೆ ಇದಾಗಿತ್ತು. ಈ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಮತ್ತು ಚೀನಾದ ನಾಲ್ಕು ಸೈನಿಕರು ಮೃತಪಟ್ಟಿದ್ದರು.

ಗಡಿ ಭಾಗದಲ್ಲಿ ಕೈಗೊಂಡ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ಮತ್ತು ಗಡಿ ರೇಖೆಯ ಕುರಿತಾದ ಗೊಂದಲಗಳು ಈ ಘರ್ಷಣೆಗೆ ಪ್ರಮುಖ ಕಾರಣವಾಗಿತ್ತು. ಘರ್ಷಣೆಯ ಬಳಿಕ ಎರಡು ರಾಷ್ಟ್ರಗಳು ಸಂಭಾವ್ಯ ಉದ್ವಿಗ್ನತೆಯನ್ನು ತಡೆಯಲು ಮಾತುಕತೆ ನಡೆಸಲು ಪ್ರಾರಂಭಿಸಿತ್ತು.

India-China Border

ಘರ್ಷಣೆಗೆ ಕಾರಣವಾಗಿರುವ ಪ್ರದೇಶಗಳು

ಭಾರತ ಚೀನಾ ಗಡಿ ರೇಖೆಯ ಉದ್ದಕ್ಕೂ ಗಾಲ್ವಾನ್ ಸೇರಿದಂತೆ ನಾಲ್ಕು ಪ್ರದೇಶಗಳು ಘರ್ಷಣೆಗೆ ಕಾರಣವಾಗಿವೆ. ಇವೆಲ್ಲವೂ 1962ರಲ್ಲಿ ನಡೆದ ಸಂಘರ್ಷದ ವೇಳೆ ಭಾರತ ಮತ್ತು ಚೀನಾ ಸೈನಿಕರು ಹೋರಾಡಿದ ವಿವಾದಿತ ಪ್ರದೇಶಗಳಾಗಿವೆ.

ಡೆಮ್ಚೋಕ್

ಡೆಮ್ಚೋಕ್ ಪ್ರದೇಶವನ್ನು ಗಡಿ ನಿಯಂತ್ರಣ ರೇಖೆಯಿಂದ ವಿಭಜಿಸಲಾಗಿದೆ. ಪಶ್ಚಿಮ ಭಾಗದಲ್ಲಿ ಭಾರತಕ್ಕೆ ನಿಯತ್ರಣ ಇದ್ದರೆ ಚೀನಾ ಪೂರ್ವ ಭಾಗದಲ್ಲಿ ಹಿಡಿತ ಹೊಂದಿದೆ. ಆದರೆ ಇಲ್ಲಿ ಚೀನಾ ಪಶ್ಚಿಮ ಭಾಗವನ್ನು ಕೂಡ ನಿಯಂತ್ರಿಸುತ್ತಿರುವುದಾಗಿ ಹೇಳುತ್ತಿದೆ. ಈ ನಿಟ್ಟಿನಲ್ಲಿ ಮಾತುಕತೆಗಳು ಮುಂದುವರಿದಿದ್ದು, ಚೀನಾವನ್ನು ಪಶ್ಚಿಮದಿಂದ ನಿರ್ಗಮಿಸುವಂತೆ ಮಾಡುವುದಕ್ಕಾಗಿ ಮಾತುಕತೆ ನಡೆಸಲಾಗುತ್ತಿದೆ.

ಪ್ಯಾಂಗೊಂಗ್

ಪ್ಯಾಂಗೊಂಗ್ ಸರೋವರದ ಸುಮಾರು ಶೇ. 50ರಷ್ಟು ಭಾಗ ಟಿಬೆಟ್‌ನಲ್ಲಿದ್ದು, ಚೀನಾದ ನಿಯಂತ್ರಣದಲ್ಲಿದೆ. ಶೇ. 40ರಷ್ಟು ಭಾಗ ಲಡಾಖ್‌ನಲ್ಲಿದ್ದು, ಶೇ. 10ರಷ್ಟು ಭಾಗ ವಿವಾದಿತ ಪ್ರದೇಶವಾಗಿದೆ. ಗಡಿ ನಿಯಂತ್ರಣ ರೇಖೆಯನ್ನು ನಿಗದಿಪಡಿಸುವಲ್ಲಿ ಉಂಟಾಗಿರುವ ಗೊಂದಲಗಳು ಮಿಲಿಟರಿ ನಿಯೋಜನೆ ಗೊಂದಲಕ್ಕೆ ಕಾರಣವಾಗಿದೆ. ಇಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯಗಳು ಎರಡೂ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಹೆಚ್ಚಿಸುತ್ತಿವೆ.

ಹಾಟ್ ಸ್ಪ್ರಿಂಗ್ಸ್

ಗೋಗ್ರಾ ಪೋಸ್ಟ್ ಬಳಿ ಇರುವ ಹಾಟ್ ಸ್ಪ್ರಿಂಗ್ಸ್ ಪ್ರದೇಶವು ಭಾರತಕ್ಕೆ ಮಹತ್ವದ್ದು. ಯಾಕೆಂದರೆ ಇದು ರಕ್ಷಣಾ ಕಾರ್ಯತಂತ್ರದ ಪ್ರಮುಖ ಸ್ಥಳ. ಗಡಿ ರೇಖೆಯ ನಿಯಂತ್ರಣದುದ್ದಕ್ಕೂ ಕಣ್ಗಾವಲಿಡಲು ಇದು ಸಹಾಯ ಮಾಡುತ್ತದೆ. ಈ ಪ್ರದೇಶದಲ್ಲಿ ಭಾರತದ ನಿಯಂತ್ರಣವು ಅಕ್ಸಾಯ್ ಚಿನ್‌ನಲ್ಲಿನ ಚಲನವಲನಗಳನ್ನು ಗಮನಿಸಲು ಅನುಕೂಲಕರ. ಹೀಗಾಗಿ ಗಡಿ ಭದ್ರತೆಯಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ.

Brics Summit: 16ನೇ ಬ್ರಿಕ್ಸ್‌ ಶೃಂಗಸಭೆ; ರಷ್ಯಾಗೆ ಮೋದಿ ಪ್ರಯಾಣ- ಪುಟಿನ್‌ ಜತೆ ಮಹತ್ವದ ಮಾತುಕತೆ ಸಾಧ್ಯತೆ

ಡೆಪ್ಸಾಂಗ್

ಡೆಪ್ಸಾಂಗ್ ಬಯಲು ಪ್ರದೇಶಗಳು ಗಡಿ ಭದ್ರತೆಯಲ್ಲಿ ಭಾರತಕ್ಕೆ ನಿರ್ಣಾಯಕವಾಗಿವೆ. ಯಾಕೆಂದರೆ ದೌಲತ್ ಬೇಗ್ ಓಲ್ಡಿ (DBO) ಏರ್‌ಸ್ಟ್ರಿಪ್ ಮತ್ತು ದರ್ಬುಕ್-ಶ್ಯೋಕ್-ಡಿಬಿಒ ರಸ್ತೆಗೆ ಇದು ದಾರಿ. ಅಲ್ಲದೆ ಇದು ಭಾರತದ ಉತ್ತರದ ಗಡಿ ರಕ್ಷಣೆ ಮತ್ತು ಮಿಲಿಟರಿ ಸಂಚಾರಕ್ಕೆ ಇದು ಅತ್ಯಗತ್ಯ. ಡೆಪ್ಸಾಂಗ್ ಮೇಲಿನ ನಿಯಂತ್ರಣವು ಚೀನಾದ ಪಡೆಗಳಿಗೂ ಅನುಕೂಲಕರ. ಅದರ ಸೇನೆಗಳ ಚಲನವಲನದ ಮೇಲೆ ಬೆದರಿಕೆ ಬರದಂತೆ ಇದು ತಡೆಯುತ್ತದೆ.