Friday, 22nd November 2024

Indian economy: ಭಾರತ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ಐಎಂಎಫ್‌

India largest growing economy

ನವ ದೆಹಲಿ: ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ( largest growing economy) 2024-25 ರಲ್ಲೂ ಮುಂದುವರಿಯಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ (IMF) ತಿಳಿಸಿದೆ. ‌ ಭಾರತದ ಜಿಡಿಪಿ ಪ್ರಸಕ್ತ ಸಾಲಿನಲ್ಲಿ 7%ರ ದರದಲ್ಲಿ ಬೆಳವಣಿಗೆ ದಾಖಲಿಸಲಿದೆ. ದೇಶದ ಆರ್ಥಿಕತೆಯ ಬುನಾದಿ ( macroeconomic fundamentls) ಸದೃಢವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಆರ್ಥಿಕ ಚಟುವಟಿಕೆಗಳು ಚೇತರಿಸಿದೆ ಎಂದು ಐಎಂಎಫ್‌ ಮೆಚ್ಚುಗೆ ವ್ಯಕ್ತಪಡಿಸಿದೆ.

ಐಎಂಎಫ್‌ನ ಏಷ್ಯಾ ಪೆಸಿಫಿಕ್‌ ವಿಭಾಗದ ನಿರ್ದೇಶಕರಾದ ಕೃಷ್ಣ ಶ್ರೀನಿವಾಸನ್‌ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಈ ವಿಷಯ ತಿಳಿಸಿದ್ದಾರೆ. ಹೀಗಿದ್ದರೂ, ದೇಶದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಉದ್ಯೋಗ ಸೃಷ್ಟಿ, ಕಾರ್ಮಿಕ ಕಾನೂನು ಸುಧಾರಣೆ, ಮೂಲಸೌಕರ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಮತ್ತಷ್ಟು ಆದ್ಯತೆ ನೀಡಬೇಕಾಗಿದೆ. ಯುವ ಜನರ ನಿರುದ್ಯೋಗ ಮತ್ತು ಮಹಿಳಾ ಕಾರ್ಮಿಕರ ಕೊರತೆ ವಿಚಾರದಲ್ಲಿ ಗಮನ ಹರಿಸಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.

ಭಾರತವು 2024-25ರಲ್ಲಿಯೂ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ಜಿಡಿಪಿಬೆಳವಣಿಗೆ ದರ 7% ಗೂ ಹೆಚ್ಚಲಿದೆ. ಗ್ರಾಮೀಣ ಪ್ರದೇಶದಲ್ಲಿ ಈ ವರ್ಷ ಉತ್ತಮ ಬೆಳೆ ಕೊಯ್ಲು ನಿರೀಕ್ಷಿಸಲಾಗಿದೆ. ಇದು ಆರ್ಥಿಕ ಚಟುವಟಿಕೆಗಳ ಚೇತರಿಕೆಗೆ ಸಹಕಾರಿಯಾಗಲಿದೆ. ಆಹಾರ ಹಣದುಬ್ಬರದ ಏರಿಕೆಯ ಹೊರತಾಗಿಯೂ, ಹಣದುಬ್ಬರವು 2024-25ರಲ್ಲಿ 4.4%ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ವಿವರಿಸಿದ್ದಾರೆ.

ಚುನಾವಣೆಗಳ ಹೊರತಾಗಿಯೂ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮ ಸ್ಥಿತಿಯಲ್ಲಿದೆ. ವಿದೇಶಿ ವಿನಿಮಯ ಸಂಗ್ರಹ ಸಮೃದ್ಧವಾಗಿದೆ. ಮುಂಬರುವ ದಿನಗಳಲ್ಲಿ ಮೂರು ಪ್ರಮುಖ ಕ್ಷೇತ್ರಗಳಲ್ಲಿ ಸುಧಾರಣೆಗಖು ನಡೆಯಬೇಕಾಗಿದೆ. ಮೊದಲನೆಯದಾಗಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು. ಇದಕ್ಕಾಗಿ 2019-20ರಲ್ಲಿ ಅನುಮೋದನೆಯಾಗಿರುವ ಪರಿಷ್ಕೃತ ಕಾರ್ಮಿಕ ನೀತಿ ಸಂಹಿತೆಗಳು ಜಾರಿಯಾಗಲಿದೆ ಎಂದು ನಾನು ಭಾವಿಸಿದ್ದೇನೆ. ಕಾರ್ಮಿಕ ಕಾನೂನುಗಳು ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವುದರ ಜತೆಗೆ ಸುಧಾರಣೆಗೆ ಪೂರಕವಾಗಿ ಇರಬೇಕು ಎಂದು ವಿವರಿಸಿದ್ದಾರೆ.

ಎರಡನೆಯದಾಗಿ, ಭಾರತ ಸ್ಪರ್ಧಾತ್ಮಕವಾಗುವ ನಿಟ್ಟಿನಲ್ಲಿ ಕೆಲವು ವ್ಯಾಪಾರ ನಿರ್ಬಂಧಗಳನ್ನು ತೆರವುಗೊಳಿಸಬೇಕು. ಮುಕ್ತ ವ್ಯಾಪಾರ ನೀತಿಗಳು ಕಂಪನಿಗಳ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಉದ್ಯೋಗಗಳನ್ನು ಸೃಷ್ಟಿಸುತ್ತವೆ.

ಡಿಜಿಟಲ್‌ ಮೂಲಸೌಕರ್ಯ ಸುಧಾರಣೆ

ಮೂರನೆಯದಾಗಿ, ಭೌತಿಕ ಮತ್ತು ಡಿಜಿಟಲ್‌ ಮೂಲ ಸೌಕರ್ಯಗಳನ್ನು ಸುಧಾರಿಸುವುದು ಅತ್ಯಂತ ಮುಖ್ಯ. ಕೃಷಿ ಮತ್ತು ಭೂ ಸುಧಾರಣೆಯೂ ಅವಶ್ಯಕ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿಗೂ ಒತ್ತು ನೀಡಬೇಕು. ಉದ್ಯೋಗಿಗಳ ಕೌಶಲವನ್ನು ಹೆಚ್ಚಿಸಲುಕೂಡ ಬಂಡವಾಳ ಹೂಡಿಕೆ ಅಗತ್ಯ. ಸೇವಾ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಬಲ್ಲ ಆರ್ಥಿಕತೆಯಲ್ಲಿ, ಕೌಶಲಾಭಿವೃದ್ಧಿಯೂ ನಿರ್ಣಾಯಕವಾಗುತ್ತದೆ. ಸಾಮಾಜಿಕ ಭದ್ರತೆಯ ವಲಯದಲ್ಲೂ ಸುಧಾರಣೆ ಅಗತ್ಯ ಎಂದು ವಿವರಿಸಿದ್ದಾರೆ.

ಭಾರತದಲ್ಲಿ ಈಗಲೂ ಕೆಂಪು ಪಟ್ಟಿಯ ಹಾವಳಿ ಇದೆ. ಆಡಳಿತಶಾಹಿ ವ್ಯವಸ್ಥೆ, ನಾನಾ ನಿರ್ಬಂಧಗಳು ಪ್ರಗತಿಯನ್ನು ಮಂದಗತಿಗೆ ತಿರುಗಿಸುತ್ತವೆ. ಇದರಿಂದಾಗಿ ಹೂಡಿಕೆದಾರರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೂಡಿಕೆಗೆ, ಭೂ ಸ್ವಾಧೀನ, ಯೋಜನೆಗಳ ಜಾರಿಗೆ ಹಲವು ಸವಾಲುಗಳು ಎದುರಾಗುತ್ತವೆ. ಕೊನೆಗೆ ಉದ್ದಿಮೆಯಿಂದ ನಿರ್ಗಮಿಸುವ ಪ್ರಕ್ರಿಯೆಯೂ ಸಂಕೀರ್ಣವಾಗುತ್ತದೆ ಎಂದು ಕೃಷ್ಣ ಶ್ರೀನಿವಾಸನ್‌ ವಿವರಿಸಿದ್ದಾರೆ.

ಇದನ್ನೂ ಓದಿ: Indian Economy : 2025ರಲ್ಲಿ ಭಾರತದ ಆರ್ಥಿಕತೆ ಶೇ.7ರಿಂದ 7.2ರಷ್ಟು ಬೆಳವಣಿಗೆ: ಡೆಲಾಯ್ಟ್ ವರದಿ

ಭಾರತದಲ್ಲಿ ನಿರುದ್ಯೋಗದ ಪ್ರಮಾಣ 4.9% ಕ್ಕೆ ಇಳಿಕೆಯಾಗಿದೆ. ಜನಸಂಖ್ಯೆ ಮತ್ತು ಉದ್ಯೋಗಗಳ ಅನುಪಾತದಲ್ಲಿ ಸುಧಾರಣೆ ಕಂಡು ಬರುತ್ತಿದೆ. ಹೆಚ್ಚು ಮಂದಿ ಉದ್ಯೋಗಿಗಳಾಗುತ್ತಿದ್ದಾರೆ. ಹೀಗಾಗಿ ನಿರುದ್ಯೋಗ ದರ ಇಳಿಯುತ್ತಿದೆ. ಮಾರುಕಟ್ಟೆಯಲ್ಲಿ ಕಾರ್ಮಿಕರ ಪಾಲ್ಗೊಳ್ಳುವಿಕೆಯ ಪ್ರಮಾಣ ಈಗ 56.4% ರಷ್ಟಿದೆ. ಉದ್ಯೋಗ ಮತ್ತು ಜನಸಂಖ್ಯೆಯ ಅನುಪಾತ ಸರಾಸರಿ 53.7% ರಷ್ಟಿದೆ. ಇವೆರಡೂ 1940ರಿಂದೀಚೆಗಿನ ಇತಿಹಾಸದಲ್ಲಿ ಬೆಳವಣಿಗೆಯ ಟ್ರೆಂಡ್‌ ಆಗಿದೆ. ಹೀಗಿದ್ದರೂ, ಕೃಷಿ ವಲಯದ ಉದ್ಯೋಗಗಳಲ್ಲಿ ಉತ್ಪಾದಕತೆ ಕಡಿಮೆಯಾಗುತ್ತಿದೆ ಎಂದು ವಿವರಿಸಿದ್ದಾರೆ.

ಐಎಂಎಫ್‌ ಇತ್ತೀಚೆಗೆ ಬಿಡುಗಡೆಗೊಳಿಸಿರುವ ವಿಶ್ವ ಆರ್ಥಿಕ ಮುನ್ನೋಟದಲ್ಲಿ 2024 ಮತ್ತು 2025ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆ 3.2% ರಷ್ಟಿರಬಹುದು ಎಂದು ಅಂದಾಜಿಸಲಾಗಿದೆ. ಅದರ ಪ್ರಕಾರ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳು 2024 ಮತ್ತು 2025ರಲ್ಲಿ 1.8% ಬೆಳವಣಿಗೆ ದಾಖಲಿಸಬಹುದು. ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳು ಸರಾಸರಿ 4.2% ಬೆಳವಣಿಗೆ ಸಾಧಿಸಬಹುದು.

ಹಣದುಬ್ಬರದ ಎದುರಿನ ಜಗತ್ತಿನ ಹೋರಾಟ ಬಹುತೇಕ ಯಶಸ್ವಿಯಾಗಿದೆ. ವಿಶ್ವಾದ್ಯಂತ ಹಣದುಬ್ಬರವು 2025ರ ವೇಳೆಗೆ 3.5%ಕ್ಕೆ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಐಎಂಎಫ್‌ ವಿಶ್ವಾಸ ವ್ಯಕ್ತಪಡಿಸಿದೆ.