Friday, 25th October 2024

India v/s Canada Row: ಭಾರತೀಯ ವಿದ್ಯಾರ್ಥಿಗಳ ಮೇಲೆ ಖಲಿಸ್ತಾನಿ ಉಗ್ರರ ಪ್ರಭಾವ ಹೇಗಿದೆ ಗೊತ್ತಾ? ಕೆನಡಾದಲ್ಲಿ ಏನ್‌ ನಡೀತಿದೆ? ಇಲ್ಲಿದೆ ಡಿಟೇಲ್ಸ್‌

Sanjay Verma

ನವದೆಹಲಿ: ಕೆನಡಾದಲ್ಲಿ ಬೀಡುಬಿಟ್ಟಿರುವ ಖಲಿಸ್ತಾನಿ ಉಗ್ರರು ಭಾರತದ ವಿರುದ್ಧ ಹಲವಾರು ಕುಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಖಲಿಸ್ತಾನಿ ಉಗ್ರರಿ(Khalistani terrorists)ಗೆ ಕೆನಡಾ ಸರ್ಕಾರ ಬೆಂಬಲ ನೀಡುತ್ತಿರುವ ಬಗ್ಗೆ ಭಾರತ ಆಗಾಗ ಆರೋಪ ಮಾಡುತ್ತಲೇ ಇದೆ(India v/s Canada Row). ಮತ್ತೊಂದೆಡೆ ತಮ್ಮ ನೆಲದಲ್ಲಿ ಭಾರತ ಖಲಿಸ್ತಾನಿಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ ಎಂದು ಕೆನಡಾ ದೂರುತ್ತಿದೆ. ಇದರ ನಡುವೆ ಕೆನಡಾದಲ್ಲಿರುವ ಖಲಿಸ್ತಾನಿ ಉಗ್ರರು ಭಾರತೀಯ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ ಎಂದಯ ಭಾರತದ ರಾಜತಾಂತ್ರಿಕ ಅಧಿಕಾರಿ(Indian Envoy) ಸಂಜಯ್‌ ವರ್ಮಾ(Sanjay Verma) ಹೇಳಿದ್ದಾರೆ.

ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಸಂಜಯ್‌ ವರ್ಮಾ, ನಿರಂತರವಾಗಿ ಹಣ ಸಿಗುವಂತೆ ಮಾಡುವುದಾಗಿ ಭರವಸೆ ನೀಡಿ ಭಾರತೀಯ ವಿದ್ಯಾರ್ಥಿಗಳನ್ನು ಖಲಿಸ್ತಾನಿ ಸಂಘಟನೆಗೆ ಸೇರುವಂತೆ ಪ್ರಚೋದಿಸಲಾಗುತ್ತಿದೆ. ಕೆನಡಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ವಿಚಾರಗಳ ಬಗ್ಗೆ ತಿಳಿದಿರಬೇಕು ಮತ್ತು ಖಲಿಸ್ತಾನಿ ಭಯೋತ್ಪಾದಕರು ಮತ್ತು ಉಗ್ರಗಾಮಿಗಳ ಕುಕೃತ್ಯವನ್ನು ವಿರೋಧಿಸಬೇಕು. ಕೆನಡಾದಲ್ಲಿ ವಾಸಿಸುವ ವಿದ್ಯಾರ್ಥಿಗಳ ಪೋಷಕರು ದಯವಿಟ್ಟು ಅವರೊಂದಿಗೆ ನಿಯಮಿತವಾಗಿ ಮಾತನಾಡಿ ಮತ್ತು ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ಎಂದು ಅವರು ಒತ್ತಾಯಿಸಿದರು.

ಈ ಖಲಿಸ್ತಾನಿ ಭಯೋತ್ಪಾದಕರು ಭಾರತೀಯ ವಿದ್ಯಾರ್ಥಿಗಳನ್ನು ಹೇಗೆ ನೇಮಕ ಮಾಡಿಕೊಳ್ಳುತ್ತಾರೆ ಎಂಬುದನ್ನು ವಿವರಿಸುತ್ತಾ, ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಖಲಿಸ್ತಾನಿ ಭಯೋತ್ಪಾದಕರ ಪ್ರಭಾವ ಯಾವ ರೀತಿ ಕೆಲಸ ಮಾಡುತ್ತಿದೆ ಎಂಬುದು ಎಲ್ಲರನ್ನೂ ಒಮ್ಮೆ ಬೆಚ್ಚಿಬೀಳಿಸುತ್ತದೆ. ಉದ್ಯೋಗ, ಹಣದ ಆಸೆ ತೋರಿಸಿ ಖಲಿಸ್ತಾನಿ ಉಗ್ರರಯ ವಿದ್ಯಾರ್ಥಿಗಳನ್ನು ದುಷ್ಕೃತ್ಯಕ್ಕೆ ಪ್ರಚೋದಿಸುತ್ತಿದ್ದಾರೆ. ಈ ವಿದ್ಯಾರ್ಥಿಗಳು ಕೆನಡಾದಲ್ಲಿ ಭಾರತೀಯ ರಾಜತಾಂತ್ರಿಕ ಕಟ್ಟಡಗಳ ಹೊರಗೆ ಪ್ರತಿಭಟಿಸುವ ಫೊಟೋ ಮತ್ತು ವೀಡಿಯೊ ಪುರಾವೆಗಳನ್ನು ತೆಗೆದುಕೊಳ್ಳುವಂತೆ ಮನವೊಲಿಸುತ್ತಾರೆ. ಸಾಮಾನ್ಯವಾಗಿ ಭಾರತ ವಿರೋಧಿ ಘೋಷಣೆಗಳನ್ನು ಕೂಗುವಂತೆ ಮತ್ತು ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಾರೆ.

ಇದಾದ ನಂತರ ಆ ವಿದ್ಯಾರ್ಥಿಗಳಿಗೆ ಭಾರತಕ್ಕೆ ಬಂದರೆ ಶಿಕ್ಷೆಯಾಗುವ ಭೀತಿ ಎದುರಾಗುತ್ತದೆ. ಹೀಗಾಗಿ ಅವರು ಶಾಶ್ವತವಾಗಿ ಖಲಿಸ್ತಾನಿ ಉಗ್ರರ ಜತೆಗೆ ಉಳಿದುಬಿಡುತ್ತಾರೆ. ಇಂತಹ ಅನೇಕ ಪ್ರಕರಣಗಳು ನಡೆದಿವೆ. ಹೀಗಾಗಿ ಕೆನಡಾದಲ್ಲಿರುವ ತಮ್ಮ ಮಕ್ಕಳ ಮೇಲೆ ನಿಗಾ ಇಡಿ. ಆ ದೇಶದಲ್ಲಿ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಗಳು ಸಕ್ರಿಯವಾಗಿದ್ದು, ಅದು ಭಾರತೀಯ ವಿದ್ಯಾರ್ಥಿಗಳನ್ನು ತಪ್ಪು ದಾರಿಗೆ ತಳ್ಳುತ್ತಿವೆ ಎಂದು ಸಂಜಯ್ ವರ್ಮಾ ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Hardeep Singh Nijjar: ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ಕೊಡಿ; ಕೆನಡಾಕ್ಕೆ ಭಾರತ ಟಾಂಗ್‌