ಚಂಡೀಗಢ: ಈ ಬಾರಿ INDIA ಬಣ ಅಧಿಕಾರಕ್ಕೆ ಬಂದರೆ ‘ಅಗ್ನಿವೀರ್’ ಸೇನಾ ನೇಮಕಾತಿ ಯೋಜನೆ ರದ್ದುಪಡಿಸಿ ಕಸದ ಬುಟ್ಟಿಗೆ ಎಸೆಯಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.
ಹರಿಯಾಣದ ಮಹೇಂದ್ರಗಢ-ಭಿವಾನಿ ಲೋಕಸಭಾ ಕ್ಷೇತ್ರದಲ್ಲಿ ನಡೆದ ತಮ್ಮ ಮೊದಲ ಚುನಾವಣಾ ಸಭೆಯಲ್ಲಿ ಮಾತನಾಡಿ, ರೈತರ ಸಮಸ್ಯೆಗೆ ಸಂಬಂಧಿಸಿದಂತೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಅಗ್ನಿವೀರ್ ಯೋಜನೆ ಇದು ಮೋದಿಯ ಯೋಜನೆ, ಸೇನೆಯ ಯೋಜನೆ ಅಲ್ಲ. ಸೇನೆಗೆ ಇದು ಬೇಕಾಗಿಲ್ಲ. ಈ ಯೋಜನೆಯನ್ನು ಪಿಎಂಒ (ಪ್ರಧಾನಿ ಕಚೇರಿ) ರೂಪಿಸಿದೆ. INDIA ಬಣ ಅಧಿಕಾರಕ್ಕೆ ಬಂದರೆ ‘ ಅಗ್ನಿವೀರ್ ಯೋಜನೆಯನ್ನು ಕಸದ ಬುಟ್ಟಿಯಲ್ಲಿ ಹಾಕುತ್ತೇವೆ. ಭಾರತದ ಗಡಿಗಳು ಹರಿಯಾಣ ಮತ್ತು ದೇಶದ ಯುವಕರಿಂದ ಸುರಕ್ಷಿತವಾಗಿದೆ. ಮೋದಿ ಹಿಂದೂಸ್ತಾನ್ ಕೆ ಜವಾನ ರನ್ನು ಕಾರ್ಮಿಕರನ್ನಾಗಿ ಪರಿವರ್ತಿಸಿದ್ದಾರೆ ಎಂದರು.
ಮೋದಿ ಸರ್ಕಾರ 22 ಉನ್ನತ ಕೈಗಾರಿಕೋದ್ಯಮಿಗಳ 16 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡುತ್ತದೆ. ಆದರೆ “ರೈತರ ಸಾಲವನ್ನು ಮನ್ನಾ ಮಾಡುವು ದಿಲ್ಲ. ಏಕೆಂದರೆ ಅದು ಅವರನ್ನು ಹಾಳುಮಾಡುತ್ತದೆ” ಎಂದು ಬಹಿರಂಗವಾಗಿ ಹೇಳುತ್ತಾರೆ
ರೈತರನ್ನು ರಕ್ಷಿಸಲು ಮತ್ತು ಅವರಿಗೆ ಸೂಕ್ತ ಪರಿಹಾರ ನೀಡಲು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಭೂಸ್ವಾಧೀನ ಮಸೂದೆಯನ್ನು ಮೋದಿ ಸರ್ಕಾರ ಅದನ್ನು ರದ್ದುಗೊಳಿಸಿತು. ಅವರು ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಬೀದಿಗಿಳಿಯಬೇಕಾಯಿತು” ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷರು ಹೇಳಿದರು.