Sunday, 28th April 2024

ಡಿ.೬ರಂದು ಐ.ಎನ್.​ಡಿ.ಐ.ಎ ಮೈತ್ರಿಕೂಟದ ಸಭೆ

ನವದೆಹಲಿ: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶಗಳು ಬಹುತೇಕ ಸ್ಪಷ್ಟವಾಗುತ್ತಿದ್ದು, ಬಿಜೆಪಿ ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ನಿಚ್ಚಳ ಬಹುಮತ ಸಾಧಿಸುವ ಲಕ್ಷಣಗಳು ಗೋಚರಿಸಿವೆ.

ಜೊತೆಗೆ ಛತ್ತೀಸಗಢದಲ್ಲಿ ಕೂಡ ಬಿಜೆಪಿ ಪಕ್ಷವು ಕಾಂಗ್ರೆಸ್​ನೊಂದಿಗೆ ಸಮಬಲದ ಹೋರಾಟ ನಡೆಸುತ್ತಿದೆ. ಹಿಂದಿ ಹೃದಯಭಾಗದ ರಾಜ್ಯಗಳಲ್ಲಿನ ಸೋಲು ಕಾಂಗ್ರೆಸ್​ನ ನಿದ್ದೆಗೆಡಿಸಿದ್ದು, ಲೋಕಸಭಾ ಚುನಾವಣೆಯ ತಂತ್ರಗಾರಿಕೆಯ ಬಗ್ಗೆ ಚರ್ಚಿಸಲು ಅದು ಬರುವ ಡಿ.6ರಂದು ಐಎನ್​ಡಿಐಎ (I.N.D.I.A) ಮೈತ್ರಿಕೂಟದ ಸಭೆ ನಡೆಸಲು ಮುಂದಾಗಿದೆ. ಬಿಜೆಪಿ ವಿರೋಧಿ ನಿಲುವು ಹೊಂದಿರುವ ಪಕ್ಷಗಳ ಐಎನ್​ಡಿಐಎ ಮೈತ್ರಿಕೂಟ ಈಗಾಗಲೇ ಪಾಟ್ನಾ, ಮುಂಬೈ ಮತ್ತು ಬೆಂಗಳೂರಿನಲ್ಲಿ ಮೂರು ಸಭೆಗಳನ್ನು ನಡೆಸಿದೆ.

ಮುಂದಿನ ಸಭೆಗೂ ಮುನ್ನ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಮೈತ್ರಿಕೂಟದ ಪಾಲುದಾರರಿಗೆ ಕರೆ ಮಾಡಿ ಸಭೆಗೆ ಬರುವಂತೆ ಆಹ್ವಾನಿಸಿದ್ದಾರೆ. ಎನ್​ಸಿಪಿ (ಶರದ್ ಪವಾರ್ ಬಣ) ನಾಯಕಿ ಸುಪ್ರಿಯಾ ಸುಳೆ ಮುಂದಿನ ಸಭೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿದೆ ಎಂದು ಸುಳಿವು ನೀಡಿದ್ದರು.

ಲೋಕಸಭಾ ಚುನಾವಣೆಗೆ ಕೇವಲ ನಾಲ್ಕರಿಂದ ಐದು ತಿಂಗಳು ಬಾಕಿ ಇರುವಾಗ ಸೀಟು ಹಂಚಿಕೆ ವಿಷಯ ಸಭೆಯಲ್ಲಿ ಮುಖ್ಯವಾಗಿ ಚರ್ಚೆಗೆ ಬರಲಿದೆ. ಸಂಸತ್ತಿಗೆ ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಕಳುಹಿಸುವ ಎರಡು ಹಿಂದಿ ಹೃದಯಭಾಗದ ರಾಜ್ಯಗಳಾದ ರಾಜಸ್ಥಾನ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋಲುತ್ತಿರುವುದು ಫಲಿತಾಂಶಗಳಲ್ಲಿ ಕಂಡು ಬಂದಿರುವುದರಿಂದ ಮುಂದಿನ ಐಎನ್​​ಡಿಐಎ ಬಣದ ಸಭೆ ಕಾಂಗ್ರೆಸ್​ ಪಾಲಿಗೆ ನಿರ್ಣಾಯಕವಾಗಿದೆ.

ಏತನ್ಮಧ್ಯೆ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಮಿತ್ರ ಪಕ್ಷ ಸಮಾಜವಾದಿ ಪಕ್ಷವು ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿರುವುದು ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿದೆ.

ಐಎನ್​ಡಿಐಎ ಅಥವಾ ‘ಇಂಡಿಯನ್ ನ್ಯಾಷನಲ್ ಡೆವಲಪ್​ಮೆಂಟ್​ ಇನ್​ಕ್ಲೂಸಿವ್ ಅಲೈಯನ್ಸ್’ ಕಾಂಗ್ರೆಸ್ ಸೇರಿದಂತೆ 28 ವಿರೋಧ ಪಕ್ಷಗಳ ಒಕ್ಕೂಟವಾಗಿದೆ. ಪ್ರಧಾನಿ ಮೋದಿಯವರ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್​ಡಿಎ)ವನ್ನು ಎದುರಿಸಲು ಮತ್ತು 2024 ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಸತತ ಮೂರನೇ ಅವಧಿಗೆ ಗೆಲ್ಲುವುದನ್ನು ತಡೆಯಲು ಈ ಎಲ್ಲ ಪಕ್ಷಗಳು ಒಗ್ಗೂಡಿವೆ.

Leave a Reply

Your email address will not be published. Required fields are marked *

error: Content is protected !!