ನವದೆಹಲಿ: ಅಂತಿಮ ಹಂತದ ಮತದಾನ ನಡೆಯುವ ಜೂನ್ 1ರಂದು ಇಂಡಿಯಾ ಮೈತ್ರಿಕೂಟ ಮಹತ್ವದ ಸಭೆಯನ್ನು ಕರೆದಿದೆ.
ಲೋಕಸಭಾ ಚುನಾವಣೆ 2024ರ ಕೊನೆಯ ಹಂತದ ಮತದಾನ ಬಾಕಿ ಇದೆ. ಜೂನ್ 1ರ ಶನಿವಾರ ಅಂತಿಮ ಹಂತದ ಮತದಾನ ನಡೆಯಲಿದ್ದು, ಜೂನ್ 4ರ ಮಂಗಳವಾರ ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಎದುರಿಸಲು ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟ ರಚನೆಯಾಗಿದೆ.
ಜೂನ್ 1ರಂದು ಅಂತಿಮ ಹಂತದ ಮತದಾನ ನಡೆದು, ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗುತ್ತವೆ. ಅಂದೇ ಇಂಡಿಯಾ ಮೈತ್ರಿಕೂಟ ಸಭೆ ಯನ್ನು ಕರೆದಿದ್ದು, ಮೈತ್ರಿಕೂಟದ ಎಲ್ಲಾ ಪಕ್ಷದ ನಾಯಕರಿಗೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲಾಗಿದೆ.
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುವ 4 ದಿನಗಳ ಮೊದಲು ನವೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ಈ ಸಭೆ ನಡೆಯಲಿದೆ. ಜೂನ್ 2ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಹಾರ್ ಜೈಲಿಗೆ ಶರಣಾಗಬೇಕಿದೆ.
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಈ ಸಭೆಯನ್ನು ಕರೆಯಲಾಗಿದೆ.
ಇಂಡಿಯಾ ಮೈತ್ರಿಕೂಟದ ಸಭೆಗೆ ಈಗಾಗಲೇ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಸೇರಿದಂತೆ ಅನೇಕ ನಾಯಕರಿಗೆ ಆಹ್ವಾನ ನೀಡಲಾಗಿದೆ.
ಶನಿವಾರ 6ನೇ ಹಂತದ ಮತದಾನ ಮುಕ್ತಾಯಗೊಳ್ಳುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷ ಇಂಡಿಯಾ ಮೈತ್ರಿಕೂಟ ಸರಳ ಬಹುಮತದ 272 ಸೀಟುಗಳನ್ನು ಪಡೆಯಲಿದೆ. ನಮ್ಮ ಗುರಿ 350 ಸೀಟುಗಳನ್ನು ಪಡೆಯುವುದು ಎಂದು ಹೇಳಿತ್ತು. ಎನ್‌ಡಿಎ ಮೈತ್ರಿಕೂಟವನ್ನು ಇಂಡಿಯಾ ಈ ಬಾರಿ ಅಧಿಕಾರದಿಂದ ದೂರ ಇಡಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದರು.
ನರೇಂದ್ರ ಮೋದಿ ಅವರ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಇದೆಲ್ಲವನ್ನೂ ನೋಡಿ ಜನರು ಮತದಾನ ಮಾಡಿದ್ದಾರೆ” ಎಂದು ಖರ್ಗೆ ಹೇಳಿದರು.