Sunday, 24th November 2024

Indian Army: ಭಾರತೀಯ ಸೇನೆ ತಾಂತ್ರಿಕ ಪ್ರವೇಶ ಯೋಜನೆಗೆ ಅರ್ಜಿ ಆಹ್ವಾನ

Indian Army

ಭಾರತೀಯ ಸೇನೆಯ (Indian Army) ತಾಂತ್ರಿಕ ಪ್ರವೇಶ ಯೋಜನೆಗಾಗಿ (Technical Entry Scheme-TES-53) ಅರ್ಹ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಾಲ್ಕು ವರ್ಷಗಳ ಈ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಸೇನೆಯಲ್ಲಿ ಲೆಫ್ಟಿನೆಂಟ್ ಶ್ರೇಣಿಯ ಹುದ್ದೆಯನ್ನು ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು 2024 ನವೆಂಬರ್ 7ರೊಳಗೆ ಸಲ್ಲಿಸಬೇಕು.

ಅರ್ಹತೆ ಏನು?

ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ (PCM) ವಿಷಯದಲ್ಲಿ 12ನೇ ತರಗತಿ ಉತ್ತೀರ್ಣರಾಗಿರುವ ಮತ್ತು 2024ರ ಜೆಇಇ (ಮೇನ್ಸ್) ಬರೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಯ ವಯಸ್ಸು ಹದಿನಾರುವರೆ ವರ್ಷಕ್ಕಿಂತ ಕಡಿಮೆ ಮತ್ತು ಹತ್ತೊಂಬತ್ತುವರೆ ವರ್ಷಕ್ಕಿಂತ ಮೇಲ್ಪಟ್ಟಿರಬಾರದು. 2006ರ ಜನವರಿ 2ರ ಬಳಿಕ ಮತ್ತು 2009ರ ಜನವರಿಯೊಳಗೆ ಜನಿಸಿರುವವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಯುಪಿಎಸ್ ಸಿ ಪರೀಕ್ಷೆಯಲ್ಲಿ ಡಿಬಾರ್ ಆದವರು, ಕ್ರಿಮಿನಲ್ ಪ್ರಕರಣ ಹೊಂದಿರುವವರು, ಯಾವುದೇ ಕಾರಣದಿಂದ ಬಂಧನಕ್ಕೆ ಒಳಗಾಗಿರುವ ಅಥವಾ ಅಪರಾಧಿಯಾಗಿರುವವರು, ಯಾವುದೇ ನ್ಯಾಯಾಲಯದ ಪ್ರಕರಣದಲ್ಲಿ ಭಾಗಿಯಾಗಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

ಆಯೋಗದ ಪ್ರಕಾರ ತಾಂತ್ರಿಕ ಪ್ರವೇಶ ಯೋಜನೆಯ (TES-53) ನಾಲ್ಕು ವರ್ಷಗಳ ಕೋರ್ಸ್ ಅನ್ನು ಪೂರ್ಣಗೊಳಿಸಿದ ಕೆಡೆಟ್‌ಗಳಿಗೆ ಸೈನ್ಯದಲ್ಲಿ ಲೆಫ್ಟಿನೆಂಟ್ ಶ್ರೇಣಿಯಲ್ಲಿ ಖಾಯಂ ಹುದ್ದೆಯನ್ನು ನೀಡಲಾಗುತ್ತದೆ.

ಪದವಿ ಪ್ರದಾನ

ನಾಲ್ಕು ವರ್ಷಗಳ ತರಬೇತಿ ಪೂರ್ಣಗೊಂಡ ಅಭ್ಯರ್ಥಿಗಳಿಗೆ ಎಂಜಿನಿಯರಿಂಗ್ ಪದವಿಯನ್ನು ನೀಡಲಾಗುತ್ತದೆ. ಈ ಪದವಿಯ ಕಾರಣದಿಂದ ಅಭ್ಯರ್ಥಿಗೆ ಯಾವುದೇ ಹಿರಿತನವನ್ನು ನೀಡಲಾಗುವುದಿಲ್ಲ. ನಾಲ್ಕು ವರ್ಷಗಳ ಅವಧಿಯ ತರಬೇತಿಯಲ್ಲಿ ಗರಿಷ್ಠ ಎರಡು ಬಾರಿ ದೇಶದಿಂದ ಹೊರಕ್ಕೆ ಹೋಗಲು ಅವಕಾಶವಿದೆ.

Job News: ಐಒಸಿಎಲ್‌ನಲ್ಲಿ ವಿವಿಧ ವೈದ್ಯಕೀಯ ತಜ್ಞರ ಹುದ್ದೆಗೆ 24, 25ರಂದು ನೇರ ಸಂದರ್ಶನ

ತರಬೇತಿ ಅವಧಿಯಲ್ಲಿ ವೇತನ

ಮೂರು ವರ್ಷಗಳ ತರಬೇತಿಯನ್ನು ಪೂರ್ಣಗೊಳಿಸಿದ ಅನಂತರ ಎನ್‌ಡಿಎ ಕೆಡೆಟ್‌ಗಳಿಗೆ ನೀಡುವಂತೆ ಸಂಭಾವ್ಯ ಕೆಡೆಟ್‌ಗಳಿಗೆ 56,100 ರೂ. ವೇತನ ನೀಡಲಾಗುತ್ತದೆ. ನಾಲ್ಕು ವರ್ಷಗಳ ತರಬೇತಿಯನ್ನು ಪೂರ್ಣಗೊಳಿಸಿದ ಅತರ, ಅವರನ್ನು ಲೆಫ್ಟಿನೆಂಟ್ ಶ್ರೇಣಿಯಲ್ಲಿ ನಿಯೋಜಿಸಲಾಗುವುದು. ಬಳಿಕ ತಮ್ಮ ಶ್ರೇಣಿಗೆ ತಕ್ಕುದಾಗಿ ವೇತನವನ್ನು ಪಡೆಯಲು ಕೆಡೆಟ್‌ಗಳು ಅರ್ಹರಾಗಿರುತ್ತಾರೆ.