ಹೊಸದಿಲ್ಲಿ: ಅಮೆರಿಕದ ಡಾಲರ್(U.S. dollar) ಎದುರು ಮಂಗಳವಾರ (ಡಿ. 3)ದ ವಹಿವಾಟಿನಲ್ಲಿ ರೂಪಾಯಿ ಮೌಲ್ಯ (Indian Rupee)ವು ಕನಿಷ್ಠ ಮಟ್ಟಕ್ಕೆ ಕುಸಿದು 84.69ಕ್ಕೆ ತಲುಪಿದೆ. ಮಂಗಳವಾರ ಆರಂಭದಲ್ಲಿ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 84.74ಕ್ಕೆ ತಲುಪಿದ್ದ ರೂಪಾಯಿ ಮೌಲ್ಯದಲ್ಲಿ ದಿನಾಂತ್ಯದ ವೇಳೆಗೆ ತುಸು ಚೇತರಿಕೆ ಕಂಡು ಬಂದಿದೆ.
ದೇಶೀಯ ಷೇರುಗಳಲ್ಲಿ ಸಕಾರಾತ್ಮಕ ಪ್ರವೃತ್ತಿಯ ಮಧ್ಯೆ ರೂಪಾಯಿ ತನ್ನ ಸಾರ್ವಕಾಲಿಕ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡಿತು ಮತ್ತು ಮಂಗಳವಾರದ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ 3 ಪೈಸೆ ಲಾಭದೊಂದಿಗೆ 84.69ಕ್ಕೆ (ತಾತ್ಕಾಲಿಕ) ಸ್ಥಿರವಾಯಿತು.
ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವೇನು?
ಅಮೆರಿಕದ ಡಾಲರ್ ಎದುರು ಸೋಮವಾರ ರೂಪಾಯಿ ಮೌಲ್ಯವು 12 ಪೈಸೆಯಷ್ಟು ಕುಸಿದು 84.72ಕ್ಕೆ ತಲುಪಿತ್ತು. ಬ್ರಿಕ್ಸ್ ರಾಷ್ಟ್ರಗಳು ಅಮೆರಿಕದ ಡಾಲರ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದರೆ ಆ ದೇಶಗಳ ಆಮದುಗಳ ಮೇಲೆ ಶೇ. 100ರಷ್ಟು ಸುಂಕ ವಿಧಿಸಲಾಗುತ್ತದೆ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಡಾಲರ್ ಮೌಲ್ಯ ವೃದ್ಧಿಸಿ, ರೂಪಾಯಿ ಮೌಲ್ಯ ಇಳಿಕೆಯಾಗಿದೆ. ಬ್ರಿಕ್ಸ್ ರಾಷ್ಟ್ರಗಳು ಡಾಲರ್‌ಗೆ ಪರ್ಯಾಯವಾಗಿ ಪ್ರತ್ಯೇಕ ಕರೆನ್ಸಿ ರಚನೆಗೆ ಮುಂದಾಗಿರುವುದರಿಂದ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ.
ರೂಪಾಯಿ ಮೌಲ್ಯ ದುರ್ಬಲಗೊಂಡರೆ ಏನಾಗುತ್ತೆ?
ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ದುರ್ಬಲಗೊಂಡರೆ ಅದು ಆರ್ಥಿಕತೆಯ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಕಚ್ಚಾ ತೈಲ ಆಮದು ಮಾಡಿಕೊಳ್ಳುವುದು ದುಬಾರಿಯಾಗುತ್ತದೆ. ಕಚ್ಚಾ ತೈಲದ ಬೆಲೆಯಿಂದಾಗಿ, ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗುತ್ತದೆ. ಡಾಲರ್‌ನಲ್ಲಿ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಬೆಲೆಯೂ ಏರಿಕೆಯಾಗುತ್ತದೆ. ವಿದೇಶದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳು ಹಾಸ್ಟೆಲ್‌ಗಳು, ಕಾಲೇಜು ಶುಲ್ಕಗಳು, ಆಹಾರ ಮತ್ತು ಸಾರಿಗೆಗಾಗಿ ಡಾಲರ್‌ಗಳಲ್ಲಿ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಮಾತ್ರವಲ್ಲ ಗ್ರಾಹಕರ ಕೊಳ್ಳುವ ಶಕ್ತಿ ಕಡಿಮೆಯಾಗಲಿದೆ. ಒಟ್ಟಿನಲ್ಲಿ ಭಾರತದ ಆರ್ಥಿಕತೆಯ ಮೇಲೆ ಹೊಡೆತ ಬೀಳುವ ಸಾಧ್ಯತೆ ಇದೆ ಎನ್ನುವ ಕಳವಳ ಮೂಡಿದೆ.
ಭಾರತೀಯ ರೂಪಾಯಿಯ ಮೌಲ್ಯದ ಕುಸಿತ ಮುಂದಿನ ದಿನಗಳಲ್ಲಿ ಮತ್ತಷ್ಟು ಮುಂದುವರಿಯುವ ನಿರೀಕ್ಷೆಯಿದೆ.
ಪ್ರತಿ ಡಾಲರ್‌ಗೆ 85 ರೂ. ಮಟ್ಟಕ್ಕೆ ತಲುಪುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ಊಹಿಸಿದ್ದಾರೆ. ʼʼಜಾಗತಿಕವಾಗಿ ಮತ್ತು ದೇಶೀಯವಾಗಿ ಇತ್ತೀಚೆಗೆ ಕಂಡು ಬಂದಿರುವ ಬೆಳವಣಿಗೆಗಳು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ. ಅದರಲ್ಲಿಯೂ ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪುನರಾಯ್ಕೆ ಆಗಿರುವುದೂ ಪ್ರಭಾವ ಬೀರಿದೆ. ಸದ್ಯ ದೇಶದ ಜಿಡಿಪಿ ಕುಸಿತವೂ ರೂಪಾಯಿ ಮೌಲ್ಯದ ಕುಸಿತಕ್ಕೆ ಸಾಕಷ್ಟು ಕೊಡುಗೆ ನೀಡಿದೆʼʼ ಎಂದು ತಜ್ಞರು ತಿಳಿಸಿದ್ದಾರೆ.
ʼʼಜತೆಗೆ ವಿದೇಶಿ ಬಂಡವಾಳದ ಹೊರ ಹರಿವು ಕೂಡ ರೂಪಾಯಿ ಮೌಲ್ಯ ಇಳಿಕೆಗೆ ಕಾರಣವಾಗಿದೆ. ಪ್ರಸಕ್ತ ಸಾಲಿನಲ್ಲಿ ಎಫ್ಐಐ (Foreign institutional investors)ಗಳು ಭಾರತೀಯ ಮಾರುಕಟ್ಟೆಗಳಿಂದ ಸುಮಾರು 1 ಲಕ್ಷ ಕೋಟಿ ರೂ.ಗಳನ್ನು ಹಿಂತೆಗೆದುಕೊಂಡಿದ್ದಾರೆʼʼ ಎಂದು ವಿವರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: RBI: ನಿಷ್ಕ್ರಿಯ, ಸ್ಥಗಿತ ಖಾತೆಗಳ ಸಂಖ್ಯೆ ಕಡಿಮೆ ಮಾಡಿ; ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ