ವಾಷಿಂಗ್ಟನ್ : ಭಾರತ ಮೂಲದ 23 ವಯಸ್ಸಿನ ವಿದ್ಯಾರ್ಥಿಯೊಬ್ಬ ತನ್ನ ಹುಟ್ಟುಹಬ್ಬವನ್ನು ಅಮೆರಿಕದಲ್ಲಿ ಆಚರಿಸಿಕೊಳ್ಳುತ್ತಿದ್ದಾಗ, ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಹಾರಿದ್ದು(Shot Dead), ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಮೃತ ವಿದ್ಯಾರ್ಥಿಯನ್ನು ಆರ್ಯನ್ ರೆಡ್ಡಿ ಎಂದು ಗುರುತಿಸಲಾಗಿದೆ(Indian Student Death).
ನವೆಂಬರ್ 13 ರಂದು ಈ ಘಟನೆ ನಡೆದಿದ್ದು, ವಿದ್ಯಾರ್ಥಿ ಆರ್ಯನ್ ರೆಡ್ಡಿ ಜಾರ್ಜಿಯಾದ ಅಟ್ಲಾಂಟಾದಲ್ಲಿರುವ ಅವನ ಮನೆಯಲ್ಲಿ ಸ್ನೇಹಿತರೊಂದಿಗೆ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ. ಆಚರಣೆಯ ವೇಳೆ ತಾನು ಹೊಸದಾಗಿ ಖರೀದಿಸಿದ್ದ ಬೇಟೆಯಾಡುವ ಬಂದೂಕನ್ನು ಸ್ವಚ್ಛಗೊಳಿಸುವ ಸಲುವಾಗಿ ಹೊರಗೆ ತೆಗೆದಿದ್ದು, ಆಕಸ್ಮಿಕವಾಗಿ ಗುಂಡು ಹಾರಿದೆ. ಗುಂಡು ನೇರವಾಗಿ ಆತನ ಎದೆಯನ್ನು ಸೀಳಿದೆ. ಗುಂಡು ಆಳವಾಗಿ ಎದೆಯ ಒಳಗೆ ಹೊಕ್ಕಿದ ಪರಿಣಾಮ ಆರ್ಯನ್ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡೇಟಿನ ಶಬ್ಧ ಕೇಳಿದ ತಕ್ಷಣ ಪಕ್ಕದ ಕೋಣೆಯಲ್ಲಿ ಕುಳಿತಿದ್ದ ಸ್ನೇಹಿತರು ತನ್ನ ಸ್ನೇಹಿತನಿದ್ದ ಕೋಣೆಗೆ ಓಡಿ ಬಂದಿದ್ದಾರೆ. ಅಷ್ಟರೊಳಗಾಗಲೇ ಆರ್ಯನ್ ರಕ್ತದ ಮಡುವಿನಲ್ಲಿರುವುದನ್ನು ಸ್ನೇಹಿತರು ಕಂಡಿದ್ದಾರೆ ಎಂದು ತಿಳಿದು ಬಂದಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಏರ್ಪಾಡು ಮಾಡಿದ್ದು, ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರ್ಯನ್ ರೆಡ್ಡಿ ಅಮೆರಿಕ ದೇಶದಲ್ಲಿನ ಅಟ್ಲಾಂಟಾದ, ಕಾನ್ಸಾಸ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಮಾಸ್ಟರ್ ಆಫ್ ಸೈನ್ಸ್ ವಿಭಾಗದಲ್ಲಿ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದರು. ಅವರು ತೆಲಂಗಾಣದ ಭುವನಗಿರಿ ಜಿಲ್ಲೆಯ ಪೆದ್ದರಾವ್ ಗ್ರಾಮದವರಾಗಿದ್ದು, ಪ್ರಸ್ತುತ ಅವರ ಕುಟುಂಬಸ್ಥರು ಉಪ್ಪರ್ ಜಿಲ್ಲೆಯಲ್ಲಿ ವಾಸವಿದ್ದಾರೆ ಎಂದು ತಿಳಿದು ಬಂದಿದೆ. ಮೃತರ ದೇಹವನ್ನು ಇಂದು ( ನ.22) ತಡರಾತ್ರಿ ಅವರ ಸ್ವಗ್ರಾಮಕ್ಕೆ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Lawrence Bishnoi :ಆನ್‌ಲೈನ್‌ಲ್ಲಿ ಗ್ಯಾಂಗ್‌ಸ್ಟರ್ ಬಿಷ್ಣೋಯ್ ಟಿ ಶರ್ಟ್ ಮಾರಾಟ; ಫ್ಲಿಪ್‌ಕಾರ್ಟ್, ಮೀಶೋ ವಿರುದ್ಧ ನೆಟ್ಟಿಗರು ಫುಲ್ ಗರಂ
ಕೆಲವು ದಿನಗಳ ಹಿಂದೆಯಷ್ಟೇ ಆಕಸ್ಮಿಕವಾಗಿ ಗುಂಡು ತಗುಲಿ ಬಾಲಿವುಡ್‌ನ ಖ್ಯಾತ ನಟ ಗೋವಿಂದ (Actor Govinda) ಅವರ ಕಾಲಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗೋವಿಂದ ಪರವಾನಗಿ ಹೊಂದಿದ ತಮ್ಮ ರಿವಾಲ್ವರ್ ಅನ್ನು ಕಬೋರ್ಡ್‌ನಲ್ಲಿ ಇಡುತ್ತಿದ್ದಾಗ ಅದು ನೆಲಕ್ಕೆ ಬಿದ್ದು ಸಿಡಿದಿದೆ ಎಂದು ಅವರ ಮ್ಯಾನೇಜರ್ ಶಶಿ ಸಿನ್ಹಾ ತಿಳಿಸಿದ್ದಾರೆ. ಗುಂಡು ಅವನ ಮೊಣಕಾಲಿನ ಕೆಳಗೆ ತಗುಲಿತ್ತು. ಕೂಡಲೇ ಗೋವಿಂದ ಅವರು ಕೋಲ್ಕತ್ತಾದಲ್ಲಿದ್ದ ತನ್ನ ಪತ್ನಿ ಸುನೀತಾ ಅಹುಜಾ ಮತ್ತು ಮ್ಯಾನೇಜರ್‌ಗೆ ಕರೆ ಮಾಡಿದ್ದರು. ಅವರಿಂದ ಮಾಹಿತಿ ಪಡೆದ ಪೊಲೀಸರು ತಕ್ಷಣ ಮುಂಬೈಯ ಜುಹುನಲ್ಲಿರುವ ಗೋವಿಂದ ಅವರ ಮನೆಗೆ ಧಾವಿಸಿ ಹತ್ತಿರದ ಕ್ರಿಟಿಕೇರ್ ಆಸ್ಪತ್ರೆಗೆ ಕರೆದೊಯ್ದಿದ್ದರು.