Friday, 22nd November 2024

ಭಾರತೀಯ ಅಂಚೆಗೆ 20 ಸಾವಿರ ರೂ. ದಂಡ

ಹೈದರಾಬಾದ್‌: ಜಿಲ್ಲಾ ಗ್ರಾಹಕರ ವೇದಿಕೆಯು ಭಾರತೀಯ ಅಂಚೆಗೆ ಸುಮಾರು 20 ಸಾವಿರ ರೂಪಾಯಿ ದಂಡ ವಿಧಿಸಿದೆ.

ಈ ಮೊತ್ತವನ್ನು ನಿವೃತ್ತ ಐಪಿಎಸ್ ಅಧಿಕಾರಿಗೆ ಪಾವತಿ ಮಾಡುವಂತೆ ಜಿಲ್ಲಾ ಗ್ರಾಹಕರ ವೇದಿಕೆಯು ಅಂಚೆ ಇಲಾಖೆಗೆ ಆದೇಶದಲ್ಲಿ ತಿಳಿಸಿದೆ.

ಹೈದರಾಬಾದ್‌ನ ಜನರಲ್ ಪೋಸ್ಟ್ ಆಫೀಸ್‌ನಲ್ಲಿ ಇಂಡಿಯಾ ಪೋಸ್ಟ್ ಮೂಲಕ ವಿವಿಧ ವಸ್ತುಗಳನ್ನು ಒಳಗೊಂಡ ನಾಲ್ಕು ಪ್ಯಾಕೆಟ್‌ಗಳನ್ನು ಕಳುಹಿಸಿದ್ದಾರೆ. ಡೆಲಿವರಿ ಸಮಯದಲ್ಲಿ ಇದ್ದ ವ್ಯಕ್ತಿ ಉದ್ದೇಶಪೂರ್ವಕ ವಾಗಿ ಪಾರ್ಸೆಲ್‌ಗಳನ್ನು ಅನ್‌ಪ್ಯಾಕ್ ಮಾಡಿದ್ದಾರೆ ಎಂದು ದೂರುದಾರ ವಿಕೆ ಸಿಂಗ್ ಆರೋಪಿಸಿದ್ದಾರೆ.

ಪಾರ್ಸೆಲ್‌ಗಳು ಹರಿದ್ವಾರದಲ್ಲಿರುವ ತಮ್ಮ ಸ್ಥಳಕ್ಕೆ ಬಂದಾಗ ಈ ಪ್ಯಾಕೇಜ್‌ನಲ್ಲಿ ಸುಮಾರು 20,000 ರೂಪಾಯಿ ಮೌಲ್ಯದ ಸುಮಾರು ಹತ್ತು ಸೀರೆಗಳು ಕಾಣೆಯಾಗಿರುವುದು ಕಂಡು ಬಂದಿದೆ.

ಈ ಪಾರ್ಸೆಲ್ ರವಾನೆ ಮಾಡುವ ಸಂದರ್ಭದಲ್ಲಿ, ಪಾರ್ಸೆಲ್‌ಗಳು ಬಂದ ನಂತರ ತೆಗೆದ ವೀಡಿಯೊ ರೆಕಾರ್ಡಿಂಗ್‌ ಗಳನ್ನು ವಿಕೆ ಸಿಂಗ್ ಹೈದರಾಬಾದ್‌ನ ಜಿಲ್ಲಾ ಗ್ರಾಹಕರ ವೇದಿಕೆಗೆ ಒದಗಿಸಿದ್ದಾರೆ. ಈ ವಿಡಿಯೋದಲ್ಲಿ ಪಾರ್ಸೆಲ್‌ ಅನ್ನು ತೆರೆದಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಈ ಹಿಂದೆಯೂ ಇದೇ ರೀತಿ ಟ್ಯಾಂಪರಿಂಗ್ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ.

ವಿಕೆ ಸಿಂಗ್ ಪರಿಹಾರವನ್ನು ಕೋರಿ ಗ್ರಾಹಕರ ವೇದಿಕೆಯನ್ನು ಸಂಪರ್ಕ ಮಾಡಿದ್ದಾರೆ. ಅಂಚೆ ಕಚೇರಿಗೆ ಈ ಪಾರ್ಸೆಲ್ ಬರುವಾಗ ಸರಿಯಾಗಿತ್ತು. ಜೂನ್ 13, 2022 ರಂದು ಪಾರ್ಸೆಲ್ ಅನ್ನು ಸರಿಯಾದ ರೀತಿಯಲ್ಲಿಯೇ ಅಂಚೆ ಕಚೇರಿಯಿಂದ ವಿತರಣೆಗೆ ನೀಡಲಾಗಿದೆ ಎಂದು ಅಂಚೆ ಕಚೇರಿ ಹೇಳಿದೆ.

ಎಲ್ಲ ವಿಚಾರಣೆ ಮಾಡಿದ ಬಳಿಕ ಈ ನಷ್ಟಕ್ಕೆ ಅಂಚೆ ಇಲಾಖೆ ಅಧಿಕಾರಿಗಳೇ ಹೊಣೆಗಾರರಾಗಿದ್ದು, ಸಿಂಗ್‌ಗೆ 20,000 ರೂಪಾಯಿ ಪರಿಹಾರ ನೀಡುವಂತೆ ಭಾರತ ಅಂಚೆ ಇಲಾಖೆಗೆ ಪೀಠ ಸೂಚಿಸಿದೆ.