Saturday, 14th December 2024

ಬಾಂಬ್ ಬೆದರಿಕೆ ಕರೆ: ಇಂಡಿಗೋ ವಿಮಾನ 6E 5314 ತುರ್ತು ಭೂಸ್ಪರ್ಶ

ಮುಂಬೈ: ಚೆನ್ನೈನಿಂದ ಮುಂಬೈಗೆ ಹೊರಟಿದ್ದ ಇಂಡಿಗೋ ವಿಮಾನ 6E 5314 ಬಾಂಬ್ ಬೆದರಿಕೆಯಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಶನಿವಾರ ಚೆನ್ನೈನಿಂದ ಹೊರಟು ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ 6E 5314 ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ವರದಿಯಾಗಿದೆ.

ಬಾಂಬ್ ಬೆದರಿಕೆಯಿಂದಾಗಿ ಇಡೀ ವಿಮಾನ ಪ್ರಸ್ತುತ ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗಿದೆ. ನಿಲ್ದಾಣದ ಅಧಿಕಾರಿಗಳು ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಕಾರ್ಯಚರಣೆ ಆರಂಭಿಸಿದ್ದಾರೆ. ಈ ವಿಮಾನದಲ್ಲಿ ಒಟ್ಟು 172 ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಬಾಂಬ್ ಬೆದರಿಕೆ ಇದೆ ಎಂದು ಗೊತ್ತಾದ ಕೂಡಲೆ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದಾರೆ.

ವರದಿಯ ಪ್ರಕಾರ, ಇಂಡಿಗೋ ಸಿಬ್ಬಂದಿ ವಿಮಾನದ ಶೌಚಾಲಯದಲ್ಲಿ ಬಾಂಬ್ ಇರುವಿಕೆ ಸೂಚಿಸುವ ಪತ್ರವೊಂದನ್ನು ಕಂಡುಹಿಡಿದಿದ್ದಾರೆ. ನಂತರ ಪ್ರೋಟೋಕಾಲ್ ಅನ್ನು ಅನುಸರಿಸಿ, ವಿಮಾನ ಸುರಕ್ಷಿತವಾಗಿ ಇಳಿಸಲಾಯಿತು. ಭದ್ರತಾ ಕ್ರಮಗಳಿಗಾಗಿ ಪ್ರಯಾಣಿಕರನ್ನು ಪ್ರತ್ಯೇಕ ಸ್ಥಳದಲ್ಲಿ ಇಳಿಸ ಲಾಯಿತು.

ಒಂದು ವಾರದೊಳಗೆ ಏರ್‌ಲೈನ್‌ನ ಎರಡನೇ ಬಾಂಬ್ ಬೆದರಿಕೆಯ ಘಟನೆ ಇದಾಗಿದೆ. ಇತ್ತೀಚೆಗೆ ಚೆನ್ನೈ ವಿಮಾನನಿಲ್ದಾಣಕ್ಕೆ ಅಧಿಕಾರಿಗಳು ಪ್ರಯಾಣಿಕ ರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ವಿಮಾನ ನಿಲ್ದಾಣದಲ್ಲಿ ಸ್ಫೋಟಗಳ ಎಚ್ಚರಿಕೆಯ ಇಮೇಲ್‌ಗಳನ್ನು ಸ್ವೀಕರಿಸುತ್ತಿದ್ದರಿಂದ ಪ್ರಯಾಣಿಕರನ್ನು ಪರಿಶೀಲನೆ ವಿಚಾರಣವಾಗಿ ಗಂಟೆಗಟ್ಟಲೆ ಕಾಯಿಸುತ್ತಿದ್ದಾರೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಈ ಹಿಂದೆ ಮೇ 28ರಂದು ದೆಹಲಿಯಿಂದ ವಾರಣಾಸಿಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೂ ಇದೇ ರೀತಿಯ ಬೆದರಿಕೆ ಎದುರಾಗಿತ್ತು. 6E2211 ವಿಮಾನ ದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ತುರ್ತು ಭೂಸ್ಪರ್ಶದ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ನಂತರ ಭದ್ರತಾ ಮಾರ್ಗಸೂಚಿಗಳ ಪ್ರಕಾರ ವಿಮಾನವನ್ನು ದೂರದ ಕೊಲ್ಲಿಗೆ ಸ್ಥಳಾಂತರಿಸಲಾಯಿತು. ವಿಮಾನದಲ್ಲಿ 174 ವಯಸ್ಕರು ಮತ್ತು ಇಬ್ಬರು ಮಕ್ಕಳು ಇದ್ದರು.