ನವದೆಹಲಿ: ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯವು ಇಂದೋರ್ ಹಾಗೂ ಸೂರತ್ ನಗರಗಳನ್ನ 2020ರ ಸ್ಮಾರ್ಟ್ ಸಿಟಿ ಮಿಷನ್ ಸ್ಪರ್ಧೆಯ ವಿಜೇತ ನಗರಗಳು ಎಂದು ಘೋಷಣೆ ಮಾಡಿದೆ.
ಸ್ಮಾರ್ಟ್ ಸಿಟಿ ಸ್ಪರ್ಧೆಯ ಆರನೇ ವಾರ್ಷಿಕೋತ್ಸವದ ಅಂಗವಾಗಿ, ನಡೆಸಲಾದ ಆನ್ಲೈನ್ ಕಾರ್ಯಕ್ರಮದಲ್ಲಿ ವಿಜೇತರ ಪಟ್ಟಿಯನ್ನ ಘೋಷಣೆ ಮಾಡಲಾಗಿದೆ. ಉತ್ತರ ಪ್ರದೇಶ ರಾಜ್ಯ ಅಗ್ರಗಣ್ಯ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳನ್ನ ಮಧ್ಯಪ್ರದೇಶ ಹಾಗೂ ತಮಿಳುನಾಡು ಪಡೆದುಕೊಂಡಿದೆ.
ನಾಲ್ಕು ಹಾಗೂ ಐದನೇ ಸ್ಥಾನದಲ್ಲಿ ಚಂಡೀಗಢ ಹಾಗೂ ಉತ್ತರಾಖಂಡ್ ರಾಜ್ಯಗಳ ಹೆಸರನ್ನ ಘೋಷಿಸಿದೆ. 2019ನೇ ಸಾಲಿನಲ್ಲಿ ಸೂರತ್ ಮಾತ್ರ ಸ್ಮಾರ್ಟ್ ಸಿಟಿ ನಗರದ ಪ್ರಶಸ್ತಿಯನ್ನ ಬಾಚಿಕೊಂಡಿತ್ತು. ಇದೇ ಮೊದಲ ಬಾರಿಗೆ ಸ್ಮಾರ್ಟ್ ಸಿಟಿ ನಗರಗಳ ಆಯ್ಕೆಯನ್ನ ಪರಿಗಣಿಸಿ ರಾಜ್ಯಗಳಿಗೂ ಪ್ರಶಸ್ತಿ ನೀಡಲಾಗಿದೆ.
ಸ್ಮಾರ್ಟ್ ಸಿಟಿ ಲೀಡರ್ಶಿಪ್ ವಿಭಾಗದಲ್ಲಿ ಅಹಮದಾಬಾದ್ ಪ್ರಥಮ, ವಾರಣಾಸಿ ದ್ವಿತೀಯ ಹಾಗೂ ರಾಂಚಿ ಮೂರನೇ ಸ್ಥಾನವನ್ನ ಪಡೆದುಕೊಂಡಿದೆ. ಸೂರತ್, ಇಂದೋರ್, ಅಹಮದಾಬಾದ್, ಪುಣೆ, ವಿಜಯವಾಡ, ರಾಜಕೋಟ್, ವಡೋದರಾ, ವಿಶಾಖಪಟ್ಟಣಂ, ಪಿಂಪ್ರಿ- ಚಿಂಚ್ವಾಡ ಹವಾಮಾನ ಸ್ಮಾರ್ಟ್ ನಗರಗಳ ಮೌಲ್ಯಮಾಪನ ಚೌಕಟ್ಟಿನಲ್ಲಿ 4 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.