Saturday, 23rd November 2024

ರಾಜ್ ಕುಂದ್ರಾಗೆ ಮಧ್ಯಂತರ ಜಾಮೀನು

ಮುಂಬೈ: ಅಶ್ಲೀಲ ವಿಡಿಯೊ ದಂಧೆ ಪ್ರಕರಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾಗೆ ಬಾಂಬೆ ಹೈಕೋರ್ಟ್’ನಿಂದ ಮತ್ತೊಂದು ಪ್ರಕರಣದಲ್ಲಿ ಮಧ್ಯಂತರ ರಿಯಾಯಿತಿ ದೊರೆತಿದೆ.

ಸೆಷನ್ಸ್ ಕೋರ್ಟ್ ತನ್ನ ಬಂಧನ ಪೂರ್ವ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಕುಂದ್ರಾ ಹೈಕೋರ್ಟ್ ಮೊರೆ ಹೋಗಿದ್ದರು.

2020ರ ಅಕ್ಟೋಬರ್‍ನಲ್ಲಿ ಮುಂಬೈನ ಕ್ರೈಮ್ ಬ್ರಾಂಚ್ ಪೊಲೀಸರು ರಾಜ್‍ಕುಂದ್ರಾ ಹಾಗೂ ಇತರರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು. ಒಟಿಟಿ ವೇದಿಕೆಯಲ್ಲಿ ರಾಜ್‍ಕುಂದ್ರ ಅಶ್ಲೀಲ ಚಿತ್ರಗಳನ್ನು ಪ್ರದರ್ಶನ ಮಾಡಿದ್ದರು ಎಂಬ ಆರೋಪ ಹೊರಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ನೀಡಿ ತಮ್ಮನ್ನು ಬಂಧಿಸದಂತೆ ಸೂಚಿಸಬೇಕು ಎಂದು ರಾಜ್‍ಕುಂದ್ರ ಕೆಳಹಂತದ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲಿ ಅರ್ಜಿ ತಿರಸ್ಕಾರವಾಗಿತ್ತು. ನಂತರ ಹೈಕೋರ್ಟ್ ಮೊರೆ ಹೋಗಿದ್ದು, ಇದೇ ಪ್ರಕರಣದಲ್ಲಿ ಮತ್ತೊಬ್ಬ ವ್ಯಕ್ತಿಗೆ ಜಾಮೀನು ನೀಡಲಾಗಿದೆ. ಆದ್ಯತೆ ಮೇರೆಗೆ ತಮಗೂ ಜಾಮೀನು ನೀಡಬೇಕೆಂದು ಮನವಿ ಮಾಡಿದ್ದರು.

ವಾದ-ವಿವಾದ ಆಲಿಸಿದ ನ್ಯಾಯಮೂರ್ತಿ ಎಸ್.ಕೆ.ಸಿಂಧೆ ಅವರ ಏಕಸದಸ್ಯ ಪೀಠ ಆ.25ರ ವರೆಗೆ ರಾಜ್‍ಕುಂದ್ರ ಅವರನ್ನು ಬಂಧಿಸದಂತೆ ಮಧ್ಯಂತರ ಆದೇಶ ನೀಡಿದೆ.

2020ರ ಪ್ರಕರಣದ ಬಳಿಕವೂ ರಾಜ್‍ಕುಂದ್ರ ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಹಂಚಿಕೆ ಪ್ರವೃತ್ತಿ ಮುಂದುವರಿಸಿದ್ದರು. ಮೊಬೈಲ್ ಆಯಪ್‍ಗಳಿಗೆ ಈ ರೀತಿಯ ಚಿತ್ರಗಳನ್ನು ಮಾರಾಟ ಮಾಡುತ್ತಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಕಳೆದ ಜುಲೈನಲ್ಲಿ ಮುಂಬೈ ಪೊಲೀಸರು ರಾಜ್‍ಕುಂದ್ರ ಅವರನ್ನು ಬಂಧಿಸಿದ್ದಾರೆ. ಸದ್ಯಕ್ಕೆ ಅವರು ಜೈಲಿನಲ್ಲಿದ್ದಾರೆ.

ಸೈಬರ್ ಪೊಲೀಸರು, ರಾಜ್ ಕುಂದ್ರಾ ಮತ್ತು ಅವರ ಸಹವರ್ತಿಗಳು ಆನ್ ಲೈನ್ ನಲ್ಲಿ ಅಶ್ಲೀಲ ವೀಡಿಯೊಗಳನ್ನು ತಯಾರಿಸಿ ಹೊರಬಿಡುತ್ತಿದ್ದಾರೆ ಎಂದು ಮುಂಬೈ ಸೈಬರ್ ಕ್ರೈಂ ವಿಭಾಗದ ಪೊಲೀಸರಿಗೆ ಬಂದ ದೂರಿನ ಆಧಾರ ದ ಮೇಲೆ ಜುಲೈ 19ರಂದು ಅವರನ್ನು ವಶಕ್ಕೆ ಪಡೆಯಲಾಗಿತ್ತು.