ಕೊಲ್ಕತ್ತಾ: ನಾರದಾ ಸ್ಟಿಂಗ್ ಟೇಪ್ಸ್ ಪ್ರಕರಣದಲ್ಲಿ ಸಿಬಿಐ ಬಂಧನದಲ್ಲಿರುವ ಪಶ್ಚಿಮ ಬಂಗಾಳದ ಇಬ್ಬರು ಸಚಿವರಾದ ಸುಬ್ರತಾ ಮುಖರ್ಜಿ ಮತ್ತು ಫಿರ್ಹಾದ್ ಹಕೀಮ್, ಟಿಎಂಸಿ ಶಾಸಕ ಮದನ್ ಮಿತ್ರ ಮತ್ತು ಮಾಜಿ ನಗರ ಮೇಯರ್ ಸೋವನ್ ಚಟರ್ಜಿ ಅವರಿಗೆ ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ನೀಡಿದೆ.
ಷರತ್ತುಗಳೊಂದಿಗೆ ಗೃಹಬಂಧನದಲ್ಲಿದ್ದ ಆರೋಪಿಗಳಿಗೆ ತಲಾ 2 ಲಕ್ಷ ರೂ.ಗಳ ಜಾಮೀನು ಬಾಂಡ್‌ಗಳನ್ನು ನೀಡುವಂತೆ ಹೈಕೋರ್ಟ್‌ನ ಐದು ನ್ಯಾಯಾಧೀಶರ ನ್ಯಾಯಪೀಠ ನಿರ್ದೇಶನ ನೀಡಿತು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಅಥವಾ ಮಾಧ್ಯಮದಲ್ಲಿ ಯಾವುದೇ ಪ್ರತಿಕ್ರಿಯೆ ನೀಡದಂತೆ ನ್ಯಾಯಪೀಠ ಅವರಿಗೆ ನಿರ್ದೇಶನ ನೀಡಿತು.
ಕಲ್ಕತ್ತಾ ಹೈಕೋರ್ಟ್‌ನ 2017 ರ ಆದೇಶದ ಮೇರೆಗೆ ನಾರದಾ ಸ್ಟಿಂಗ್ ಟೇಪ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಈ ನಾಲ್ವರು ನಾಯಕರನ್ನು ಮೇ 17 ರ ಬೆಳಿಗ್ಗೆ ಬಂಧಿಸಿದೆ. ವಿಶೇಷ ಸಿಬಿಐ ನ್ಯಾಯಾಲಯವು ಮೇ 17 ರಂದು ನಾಲ್ವರು ಆರೋಪಿ ಗಳಿಗೆ ಮಧ್ಯಂತರ ಜಾಮೀನು ನೀಡಿತ್ತು. ಆದರೆ ಆಕ್ಟಿಂಗ್ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ಅರಿಜಿತ್ ಬ್ಯಾನರ್ಜಿ ಅವರನ್ನೊಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠವು ಆ ದಿನದ ನಂತರ ತೀರ್ಪನ್ನು ತಡೆ ಹಿಡಿಯಿತು.
ಐದು ನ್ಯಾಯಾಧೀಶರ ಪೀಠವು ಆಕ್ಟಿಂಗ್ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿಗಳಾದ ಐ ಪಿ ಮುಖರ್ಜಿ, ಹರೀಶ್ ಟಂಡನ್, ಸೌಮೆನ್ ಸೇನ್ ಮತ್ತು ಅರಿಜಿತ್ ಬ್ಯಾನರ್ಜಿಗಳನ್ನು ಒಳಗೊಂಡಿದೆ.