Friday, 22nd November 2024

ದೆಹಲಿಯ ಗಡಿ ಪ್ರದೇಶಗಳಲ್ಲಿ ಮತ್ತೊಮ್ಮೆ ಇಂಟರ್ನೆಟ್‌ ಸೇವೆ ಸ್ಥಗಿತ

ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ದೆಹಲಿಯ ಗಡಿ ಪ್ರದೇಶಗಳಲ್ಲಿ ಇಂಟರ್ನೆಟ್‌ ಸೇವೆ ಯನ್ನು ಕಡಿತಗೊಳಿಸಲಾಗಿದೆ.

ರೈತರು ದೇಶದಾದ್ಯಂತ ‘ಚಕ್ಕಾ ಜಾಮ್‌’ ಪ್ರತಿಭಟನೆ ಕೈಗೊಂಡಿರುವ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ 11:59 ಗಂಟೆಯವರೆಗೂ ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಗೃಹ ಇಲಾಖೆ, ‘ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಸಿಂಘು, ಘಾಜಿಪುರ, ಟಿಕ್ರಿ ಮತ್ತು ಅವುಗಳ ಅಕ್ಕಪಕ್ಕದ ಪ್ರದೇಶಗಳಲ್ಲಿ 24 ಗಂಟೆಗಳ ಕಾಲ ಇಂಟರ್ನೆಟ್‌ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸ ಲಾಗಿದೆ’ ಎಂದು ಸ್ಪಷ್ಟನೆ ನೀಡಿದೆ.

ಈ ಗಡಿ ಪ್ರದೇಶಗಳಲ್ಲಿ ಜನವರಿ 29ರ ರಾತ್ರಿ 11ರಿಂದ ಜನವರಿ 31ರ ರಾತ್ರಿ 11ರ ವರೆಗೂ ತಾತ್ಕಾಲಿಕವಾಗಿ ಅಂತರ್ಜಾಲ ಸೇವೆ ಗಳನ್ನು ಕಡಿತಗೊಳಿಸಲಾಗಿತ್ತು. ಈ ಕ್ರಮವನ್ನು ಫೆಬ್ರವರಿ 2ರ ರಾತ್ರಿ 11 ಗಂಟೆ ವರೆಗೆ ವಿಸ್ತರಿಸಲಾಗಿತ್ತು.