Thursday, 12th December 2024

ಐಎಸ್​ಐ ಶಂಕಿತ ಏಜೆಂಟ್​ ಸೇರಿ ಇಬ್ಬರ ಬಂಧನ

ಮುಂಬೈ : ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್​) ಜಂಟಿ ಕಾರ್ಯಾಚರಣೆ ನಡೆಸಿ ಓರ್ವ ಪಾಕಿಸ್ತಾನಿ ಬೇಹುಗಾರಿಕಾ ಸಂಸ್ಥೆಯ (ಐಎಸ್​ಐ) ಶಂಕಿತ ಏಜೆಂಟ್​ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.

ಈ ಬಗ್ಗೆ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಂಕಿತ ಉಗ್ರರ ಬಗ್ಗೆ ದೊರೆತ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡ ಜುಹು ಭಯೋತ್ಪಾದನಾ ನಿಗ್ರಹದಳ ಮತ್ತು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಮುಂಬೈನ ಜೋಗೇಶ್ವರ್ ಪ್ರದೇಶದಲ್ಲಿ ಭಾನುವಾರ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಅರ್ಮಾನ್​ ಸಯ್ಯದ್​ (62) ಮತ್ತು ಮೊಹಮ್ಮದ್​ ಸಲ್ಮಾನ್​ ಸಿದ್ದಿಕಿ (24) ಎಂಬಿಬ್ಬರನ್ನು ಬಂಧಿಸಲಾಗಿದೆ.

ಅರ್ಮಾನ್​ ಸಯ್ಯದ್​ ಶಂಕಿತ ಐಎಸ್​​ಐ ಏಜೆಂಟ್​ ಆಗಿದ್ದು, ಈತ ಮೊಹಮ್ಮದ್​ ಸಲ್ಮಾನ್​ ಸಿದ್ದಿಕಿಯನ್ನು ಐಎಸ್​ಐಗೆ ನೇಮಕ ಮಾಡಿಕೊಂಡಿದ್ದ ಎಂದು ಹೇಳಲಾ ಗಿದೆ. ಇಬ್ಬರೂ ಮತ್ತೊಬ್ಬ ಶಂಕಿತ ಐಎಸ್​ಐ ಏಜೆಂಟ್​ ಮೊಹಮ್ಮದ್​ ರಾಯೀಸ್​ ಎಂಬಾತನಿಗೆ ಸಹಾಯ ಮಾಡಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಂಕಿತ ಐಎಸ್​ಐ ಏಜೆಂಟ್​ ರಾಯಿಸ್​​ ಗೋಂಡಾ ನಿವಾಸಿ. ಭಾರತೀಯ ಸೇನೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಗೆ ಸೋರಿಕೆ ಮಾಡಿದ್ದಕ್ಕೆ ಈತನನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರದ ದಳದ ಅಧಿಕಾರಿಗಳು ಅರೆಸ್ಟ್‌ ಮಾಡಿದ್ದರು. ಈತ ನೀಡಿದ ಮಾಹಿತಿ ಮೇರೆಗೆ ಮುಂಬೈನ ಜೋಗೇಶ್ವರ್​ನಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಸಯ್ಯದ್​ ಮತ್ತು ಸಿದ್ದಿಕಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಉತ್ತರಪ್ರದೇಶ ಎಟಿಎಸ್​ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.