ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಘವನ್ನು (ಇಂಡಿಯನ್ ಸ್ಪೇಸ್ ಅಸೋಷಿಯೇಷನ್ -ಐಎಸ್‌ಪಿಎ) ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಉದ್ಘಾಟಿಸಿದರು.
ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಾಗಿ ಸಂಘ ಬದ್ಧತೆ ಪ್ರದರ್ಶಿಸುವುದನ್ನು ಒತ್ತಿ ಹೇಳಿದ್ದಲ್ಲದೇ, ಇಂಥ ದೃಢ ನಿರ್ಧಾರಗಳನ್ನು ಕೈಗೊಳ್ಳುವಂತಹ ಸರ್ಕಾರವನ್ನು ದೇಶ ಕಂಡಿರಲಿಲ್ಲ. ನಷ್ಟದಲ್ಲಿದ್ದ ಸಾರ್ವ ಜನಿಕ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವಲ್ಲಿನ ಸರ್ಕಾರದ ಯಶಸ್ಸನ್ನು ಉಲ್ಲೇಖಿಸಿ, ಇದು ನಮ್ಮ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ’ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.
ಅನುಪಯುಕ್ತ ಕ್ಷೇತ್ರಗಳನ್ನು ಖಾಸಗಿ ಉದ್ಯಮಿಗಳಿಗೆ ತೆರೆದಿಡಬೇಕು’ ಎನ್ನುವುದು ಸಾರ್ವಜನಿಕ ವಲಯದ ಬಗ್ಗೆ ಸರ್ಕಾರದ ನೀತಿಯಾಗಿದೆ. ನಮ್ಮ ಸರ್ಕಾರ ರಾಷ್ಟ್ರೀಯ ಹಿತಾಸಕ್ತಿ ಹಾಗೂ ವಿವಿಧ ಪಾಲುದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದೆ’ ಎಂದು ಪ್ರತಿ ಪಾದಿಸಿದರು.
ಭಾರತ ಬೃಹತ್ ಸುಧಾರಣೆಯತ್ತ ಗಮನಹರಿಸಿದೆ. ಏಕೆಂದರೆ, ‘ಆತ್ಮನಿರ್ಭರ ಭಾರತ ನಿರ್ಮಾಣ’ದ ಗುರಿ ಹೊಂದಿರುವ ರಾಷ್ಟ್ರದ ದೂರದೃಷ್ಟಿ ಸ್ಪಷ್ಟ ವಾಗಿದೆ ಎಂದು ಮೋದಿ ಹೇಳಿದರು.
ಹೊಸ ಹೊಸ ಸಂಶೋಧನೆಗಳನ್ನು ನಡೆಸಲು ಖಾಸಗಿ ವಲಯಕ್ಕೆ ಸ್ವಾತಂತ್ರ್ಯ ನೀಡುವುದು, ಸರ್ಕಾರ ಸಕ್ರಿಯವಾಗಿ ಪ್ರಮುಖ ಪಾತ್ರ ವಹಿಸುವುದು, ಭವಿಷ್ಯಕ್ಕಾಗಿ ಯುವ ಸಮೂಹವನ್ನು ಸಜ್ಜುಗೊಳಿಸುವುದು ಮತ್ತು ಬಾಹ್ಯಾಕಾಶ ವಲಯವನ್ನು ಸಾಮಾನ್ಯ ಜನರ ಅಭಿವೃದ್ಧಿಗೆ ನೆರವು ನೀಡುವ ಸಂಪನ್ಮೂಲವಾಗಿ ಕಲ್ಪಿಸುವುದು ಸೇರಿದೆ ಎಂದು ಪ್ರಧಾನಿ ವಿವರಿಸಿದರು.
ಭಾರ್ತಿ ಏರ್‌ಟೆಲ್, ಲಾರ್ಸನ್ ಅಂಡ್ ಟರ್ಬೊ, ಅಗ್ನಿಕುಲ್, ದ್ರುವಾ ಸ್ಪೇಸ್ ಅಂಡ್ ಕ್ವಾ ಸ್ಪೇಸ್‌ನಂತಹ ಭಾರತೀಯ ಬಾಹ್ಯಾಕಾಶ ಉದ್ಯಮದಲ್ಲಿ ತೊಡಗಿರುವ ಕಂಪನಿಗಳು ಸೇರಿ ‘ಭಾರತೀಯ ಬಾಹ್ಯಾಕಾಶ ಸಂಘ’ವನ್ನು (ಇಂಡಿಯನ್ ಸ್ಪೇಸ್ ಅಸೋಸಿಯೇಷನ್) ರಚಿಸಿಕೊಂಡಿವೆ.