Sunday, 27th October 2024

ISRO missions: 2026ರಲ್ಲಿ ಗಗನಯಾನ, 2028ರಲ್ಲಿ ಚಂದ್ರಯಾನ-4; ಇಸ್ರೋದಿಂದ ಮಹತ್ವದ ಘೋಷಣೆ

Isro missions

ಬೆಂಗಳೂರು: ಇಸ್ರೋ ತನ್ನ ಮುಂಬರುವ ಮಹತ್ವದ ಎರಡು ಯೋಜನೆಗಳನ್ನು ಘೋಷಿಸಿದೆ. 2026ರಲ್ಲಿ ಗಗನಯಾನ, 2028ರಲ್ಲಿ ಚಂದ್ರಯಾನ-4 ಯೋಜನೆ ಕೈಗೊಳ್ಳುವ ಸಾಧ್ಯತೆ ಇರುವುದಾಗಿ ಇಸ್ರೋ ಮುಖ್ಯಸ್ಥ ಎನ್‌. ಸೋಮನಾಥ್‌(ISRO chairman S Somanath) ತಿಳಿಸಿದ್ದಾರೆ.

ಆಕಾಶವಾಣಿಯಲ್ಲಿ (All Indian radio) ಸರ್ದಾರ್ ಪಟೇಲ್ ಸ್ಮರಣಾರ್ಥ ಉಪನ್ಯಾಸವನ್ನು ನೀಡುತ್ತಾ ಮಾತನಾಡಿದ ಅವರು, ಇಸ್ರೋದ ಮುಂಬರು ಯೋಜನೆಗಳ ಕುರಿತು ಮಾಹಿತಿ ನೀಡಿದರು. ಬಾಹ್ಯಾಕಾಶ ತಂತ್ರಜ್ಞಾನಗಳ ಹೆಚ್ಚಿನ ಸ್ವದೇಶೀಕರಣದ ಅಗತ್ಯವನ್ನು ಒತ್ತಿಹೇಳಿದ ಅವರು, ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತವು ಮುಂದಿನ ಒಂದು ದಶಕದಲ್ಲಿ ತನ್ನ ಕೊಡುಗೆಯನ್ನು ಶೇಕಡಾ 2 ರಿಂದ 10 ಪ್ರತಿಶತಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

ಮಾನವಸಹಿತ ಬಾಹ್ಯಾಕಾಶ ಮಿಷನ್ ಗಗನಯಾನ (Gaganyaan) 2026 ರಲ್ಲಿ ಉಡಾವಣೆಯಾಗುವ ಸಾಧ್ಯತೆಯಿದೆ. 2028 ರಲ್ಲಿ ಸ್ಯಾಂಪಲ್ ರಿಟರ್ನ್ ಮಿಷನ್ ಚಂದ್ರಯಾನ-4 (Chandrayaan-4) ಮತ್ತು 2025 ರಲ್ಲಿ ಬಹು ನಿರೀಕ್ಷಿತ ಭಾರತ-ಯುಎಸ್ ಜಂಟಿ NISAR ಸಾಹಸೋದ್ಯಮವನ್ನು ನಿರೀಕ್ಷಿಸಬಹುದು ಎಂದು ಹೇಳಿದರು. ಮೂಲತಃ ಲುಪೆಕ್ಸ್‌ ಅಥವಾ ಲೂನಾರ್ ಪೋಲಾರ್ ಎಕ್ಸ್‌ಪ್ಲೋರೇಶನ್ ಎಂದು ಹೆಸರಿಸಲಾದ ಜಪಾನ್ ಬಾಹ್ಯಾಕಾಶ ಸಂಸ್ಥೆ ಜಾಕ್ಸಾ (JAXA) ನೊಂದಿಗೆ ಜಂಟಿ ಚಂದ್ರ-ಲ್ಯಾಂಡಿಂಗ್ ಮಿಷನ್ ಚಂದ್ರಯಾನ-5 ಮಿಷನ್ ಆಗಿರುತ್ತದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: Chandrayaan-3: 3.85 ಶತಕೋಟಿ ವರ್ಷ ಪುರಾತನ ಚಂದ್ರನ ಕುಳಿ ಮೇಲೆ ಪ್ರಗ್ಯಾನ್‌ ರೋವರ್‌ ಲ್ಯಾಂಡಿಂಗ್‌; ಇಸ್ರೋದ ಮತ್ತೊಂದು ಸಾಧನೆ

“ಇದು ತುಂಬಾ ಮಹತ್ವದ ಕಾರ್ಯಾಚರಣೆಯಾಗಿದ್ದು, ಇದರಲ್ಲಿ ಲ್ಯಾಂಡರ್ ಅನ್ನು ಭಾರತವು ಒದಗಿಸಲಿದೆ, ಆದರೆ ರೋವರ್ ಜಪಾನ್‌ನಿಂದ ಬರಲಿದೆ. ಚಂದ್ರಯಾನ-3 ರ ರೋವರ್ ಕೇವಲ 27 ಕೆಜಿ ತೂಕವಿತ್ತು. ಆದರೆ ಈ ಮಿಷನ್ 350 ಕೆಜಿ ರೋವರ್ ಅನ್ನು ಹೊತ್ತೊಯ್ಯುತ್ತದೆ. ಇದು ವಿಜ್ಞಾನದ ಹೆವಿ ಮಿಷನ್ ಆಗಿದ್ದು, ಇದು ಚಂದ್ರನ ಮೇಲೆ ಮಾನವರನ್ನು ಇಳಿಸಲು ನಮ್ಮನ್ನು ಒಂದು ಹೆಜ್ಜೆ ಹತ್ತಿರಕ್ಕೆ ಕೊಂಡೊಯ್ಯುತ್ತದೆ . ಭಾರತವು 2040 ರ ವೇಳೆಗೆ ಚಂದ್ರನ ಮೇಲೆ ಮಾನವಸಹಿತ ಮಿಷನ್ ಉಡಾವಣೆ ಮಾಡುವ ಯೋಜನೆಯನ್ನು ಅನಾವರಣಗೊಳಿಸಿದರು.

ಭಾರತದ ಬಾಹ್ಯಾಕಾಶ ಕ್ಷೇತ್ರವನ್ನು ಬೆಳೆಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. “ದೊಡ್ಡ ಮತ್ತು ಸಣ್ಣ ಹಲವಾರು ಕೈಗಾರಿಕೆಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಆಸಕ್ತಿಯನ್ನು ವ್ಯಕ್ತಪಡಿಸಿವೆ. ಇಸ್ರೋ ಕೂಡ ಹೂಡಿಕೆದಾರರಿಗೆ ಸಹಾಯವಾಗುವಂತೆ ನೋಡಿಕೊಳ್ಳುತ್ತದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸಂಪೂರ್ಣ ಸ್ವದೇಶಿ ಉತ್ಪನ್ನ ಬಳಸುವಂತಾಗಬೇಕು ಬಹಳಷ್ಟು ನಿರ್ಣಾಯಕ ವಸ್ತುಗಳು ಇನ್ನೂ ಹೊರಗಿನಿಂದ ಬರುತ್ತವೆ. ನಮ್ಮ ದೇಶದೊಳಗೆ ಇವುಗಳನ್ನು ಸಾಕಷ್ಟು ನಿರ್ಮಿಸುವ ಸಾಮರ್ಥ್ಯವನ್ನು ನಾವು ರಚಿಸಬೇಕಾಗಿದೆ. ಸುಧಾರಿತ ಸಂಶೋಧನೆ ಮತ್ತು ಅಭಿವೃದ್ಧಿಯ ಹೆಚ್ಚಿನ ಸ್ವದೇಶೀಕರಣವೂ ಆಗಬೇಕು ಎಂದು ತಿಳಿಸಿದರು.