Friday, 22nd November 2024

ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹಣ ವರ್ಗಾವಣೆ: ಉತ್ತರಿಸುವಂತೆ ಐಟಿ ಇಲಾಖೆ ನೋಟೀಸು

ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ತನ್ನ ಅಭ್ಯರ್ಥಿಗಳಿಗೆ ವರ್ಗಾವಣೆ ಮಾಡಿದ ಹಣಕಾಸಿನ ವಿವರಗಳನ್ನು ನೀಡುವಂತೆ ಕಾಂಗ್ರೆಸ್‌ಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ.

ಪೂರ್ನಿಯಾಕ್ಕೆ ಶುಕ್ರವಾರ ಬರಬೇಕಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ಇಳಿಯಲು ನಿತೀಶ್ ಕುಮಾರ್ ಅವರ ಸರ್ಕಾರ ಅನುಮತಿ ನಿರಾಕರಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಪಟ್ನಾದ ಕಾಂಗ್ರೆಸ್ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ಇಲಾಖೆ ಅಧಿಕಾರಿಗಳ ತಂಡ ನೋಟಿಸ್ ನೀಡಿತು. ಕಾಂಗ್ರೆಸ್ ಕಚೇರಿಯ ಕಾಂಪೌಂಡ್ ಹೊರಭಾಗದಲ್ಲಿ ನಿಲ್ಲಿಸಿದ್ದ ವಾಹನವೊಂದರಲ್ಲಿ ಹಣ ಪತ್ತೆಯಾಗಿತ್ತು. ಈ ಸಂಬಂಧ ವ್ಯಕ್ತಿಯೊಬ್ಬನನ್ನು ಬಂಧಿಸ ಲಾಗಿತ್ತು. ಆತನಿಂದ 8.5 ಲಕ್ಷ ರೂ. ವಶಪಡಿಸಿಕೊಳ್ಳಲಾಗಿತ್ತು.

ಐಟಿ ಇಲಾಖೆಯು ನೋಟಿಸ್ ನೀಡಿರುವುದು ಚುನಾವಣೆಯಲ್ಲಿ ಒತ್ತಡ ಹೇರುವ ತಂತ್ರ ಎಂದು ಕಾಂಗ್ರೆಸ್ ಆರೋಪಿಸಿದೆ. ರಕ್ಸೌಲ್‌ ನಲ್ಲಿ ಬಿಜೆಪಿ ಅಭ್ಯರ್ಥಿಯಿಂದ 22 ಕೆಜಿ ಚಿನ್ನ ಮತ್ತು 2.5 ಕೆಜಿ ಬೆಳ್ಳಿ ಪತ್ತೆಯಾಗಿತ್ತು. ಐಟಿಯವರು ಎಲ್ಲಿಗೆ ಏಕೆ ಹೋಗಿಲ್ಲ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.