ಹೈದರಾಬಾದ್: ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷದ ಶಾಸಕರಾದ ಪಿ.ಶೇಖರ್ ರೆಡ್ಡಿ ಮತ್ತು ಮಾರಿ ಜನಾರ್ಧನ್ ರೆಡ್ಡಿ ಅವರಿಗೆ ಸೇರಿದ ಹಲವು ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ.
ತೆಲಂಗಾಣದ ಭೊಂಗಿರ್ ಕ್ಷೇತ್ರದ ಶಾಸಕ ಶೇಖರ್ ರೆಡ್ಡಿ ಹಾಗೂ ನಾಗರ್‌ಕರ್ನೂಲ್ ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ತೆರಿಗೆ ಪಾವತಿ ಅಕ್ರಮಕ್ಕೆ ಸಂಬಂಧಿಸಿದಂತೆ ಬಿಗಿ ಭದ್ರತೆಯಲ್ಲಿ ಶೋಧ ನಡೆಸಲಾಗುತ್ತಿದೆ. ಐಟಿ ಅಧಿಕಾರಿಗಳು 50 ತಂಡಗಳನ್ನು ರಚಿಸಿ ಕಾರ್ಯಾಚರಣೆಗಿಳಿದಿದ್ದಾರೆ.
ಶೇಖರ್ ರೆಡ್ಡಿ, ‘ತೀರ್ಥ ಗ್ರೂಪ್’ ಅಡಿಯಲ್ಲಿ ರಿಯಲ್ ಎಸ್ಟೇಟ್, ಗಣಿಗಾರಿಕೆ, ಸೌರ ಶಕ್ತಿ ಮತ್ತು ಲಿಥಿಯಂ ಬ್ಯಾಟರಿ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಈ ಕಂಪನಿಯು ದಕ್ಷಿಣ ಆಫ್ರಿಕಾದಲ್ಲಿ ಗಣಿಗಾರಿಕೆ ನಡೆಸುತ್ತಿದೆ. ಹೈದರಾಬಾದ್ ಹಾಗೂ ಕರ್ನಾಟಕದಲ್ಲಿಯು ಹಲವು ವಸತಿ ಮತ್ತು ವಾಣಿಜ್ಯ ಯೋಜನೆ ಗಳನ್ನು ನಡೆಸಿದೆ ಎನ್ನಲಾಗಿದೆ.