ನವದೆಹಲಿ: ಹಳೆಯ ಐಎಂಎ ಪ್ರಕರಣವನ್ನು ನೆಪವಾಗಿಟ್ಟುಕೊಂಡು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ನಿವಾಸ, ಕಚೇರಿ ಮೇಲೆ ಜಾರಿ ನಿರ್ದೇಶನಾ ಲಯದ (ಇ.ಡಿ.) ಅಧಿಕಾರಿಗಳು ನಡೆಸಿರುವ ದಾಳಿ ರಾಜಕೀಯ ಪ್ರೇರಿತ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಗುರುವಾರ ಪ್ರತಿಕ್ರಿಯೆ ನೀಡಿದ ಸುರೇಶ್ ಅವರು, ‘ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು ಇ.ಡಿ. ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಆದರೆ ದೆಹಲಿ ಕಚೇರಿ ಇಡಿ ಅಧಿಕಾರಿಗಳು ಎರಡು ವರ್ಷಗಳ ನಂತರ ಮತ್ತೆ ದಾಳಿ ನಡೆಸಿರುವುದು ಆಶ್ಚರ್ಯ ಮೂಡಿಸಿದೆ. ಇದೊಂದು ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.
ರಾಜಕೀಯ ಪ್ರೇರಿತ ಹಾಗೂ ರಾಜಕೀಯ ಹಿತಾಸಕ್ತಿ ಪ್ರೇರಿತ ಪ್ರಕರಣವನ್ನು ದೆಹಲಿಗೆ ವರ್ಗಾವಣೆ ಮಾಡಿಕೊಂಡು, ಸಂಬಂಧಪಟ್ಟವರಿಗೆ ರಾಜಕೀಯ ತೊಂದರೆ ನೀಡುವ ಪರಿಪಾಠವನ್ನು ಕೇಂದ್ರ ಸರ್ಕಾರ ಪಾಲಿಸುತ್ತಾ ಬಂದಿದೆ. ಇದು ದ್ವೇಷದ ರಾಜಕಾರಣ ಎಂದರು.