Friday, 22nd November 2024

‘ಅಮ್ಮ’ ನಿಗೆ ’ಭದ್ರ’ ಸ್ಥಾನ: ಜೆ.ಜಯಲಲಿತಾ ಸ್ಮಾರಕ ಉದ್ಘಾಟನೆ

ಚೆನ್ನೈ: ಬುಧವಾರ ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಮರೀನಾ ಬೀಚ್ ಬಳಿ ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಸ್ಮಾರಕವನ್ನು ಉದ್ಘಾಟಿಸಿದರು.

ತಮಿಳುನಾಡಿನಲ್ಲಿ ‘ಅಮ್ಮ’ಎಂದೇ ಖ್ಯಾತ ಜಯಲಲಿತಾ ಅವರಿಗೆ ತಮಿಳು ನಾಡಿನ ಜನತೆ ಕೊನೆಗೂ ಭದ್ರ ಸ್ಥಾನ ನೀಡಿದ್ದಾರೆ. ಮೂರು ವರ್ಷಗಳ ಹಿಂದೆ ಸ್ಮಾರಕಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.

ಈ ಸಂದರ್ಭದಲ್ಲಿ ನಾಯಕಿಯ ಗುಣಗಾನವನ್ನು ಪಕ್ಷದ ನಾಯಕರು, ಕಾರ್ಯಕರ್ತರು ಮಾಡಿದರು. ಜಯಲಲಿತಾ ಪರ ಘೋಷಣೆಗಳು ಮೊಳಗಿದವು. ಮುಖ್ಯಮಂತ್ರಿ ಪಳನಿಸ್ವಾಮಿ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಮತ್ತು ವಿಧಾನಸಭಾಧ್ಯಕ್ಷ ಪಿ ಧನಪಾಲ್ ಸಾಕ್ಷಿಯಾದರು.

ನಂತರ ಅಗಲಿದ ನಾಯಕಿಗೆ ಪುಷ್ಪ ನಮನ ಸಲ್ಲಿಸಿದರು. 2016ರ ಡಿಸೆಂಬರ್ 5ರಂದು ಜಯಲಲಿತಾ ಅವರ ಅಂತ್ಯಕ್ರಿಯೆ ನೆರವೇರಿತ್ತು. 2018ರ ಮೇ ತಿಂಗಳಲ್ಲಿ ಜಯಲಲಿತಾ ಸ್ಮಾರಕಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಎಡಿಎಂಕೆ ಪಕ್ಷದ ಸ್ಥಾಪಕ ಮಾಜಿ ಮುಖ್ಯಮಂತ್ರಿ ಎಂ ಜಿ ರಾಮಚಂದ್ರನ್ ಅವರ ಸ್ಮಾರಕ ಕೂಡ ಮರೀನಾ ಬೀಚ್ ಪಕ್ಕ ಕಾಮರಾಜರ್ ಸಲೈಯಲ್ಲಿದೆ.

ಫೀನಿಕ್ಸ್ ಮಾದರಿಯ ಜಯಲಲಿತಾ ಸ್ಮಾರಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ 50 ಕೋಟಿ ರೂಪಾಯಿ ವೆಚ್ಚ ಮಾಡಿದೆ.