ನವದೆಹಲಿ: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬುಧವಾರ 60ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂದರ್ಭದಲ್ಲಿ ನಡ್ಡಾ ಅವರಿಗೆ ಶುಭ ಕೋರಿ ಟ್ವೀಟ್ ಮಾಡಿದ್ದು, ಅವರ ಚುರುಕು ಮತ್ತು ಪ್ರೇರಣಾದಾಯಿ ನಾಯಕತ್ವದಲ್ಲಿ ಕೇಸರಿ ಪಕ್ಷವು ಹೊಸ ಎತ್ತರವನ್ನು ತಲುಪುತ್ತಿದೆ. ಅವರು ಆಯುರಾರೋಗ್ಯಗಳಿಂದ ಸುದೀರ್ಘ ಕಾಲ ಬಾಳಲಿ ಎಂದು ಹಾರೈಸಿದ್ದಾರೆ.
ಪಕ್ಷದ ನಿಕಟಪೂರ್ವ ಅಧ್ಯಕ್ಷ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ದೇಶದ ಅನೇಕ ಗಣ್ಯರು ನಡ್ಡಾ ಅವರಿಗೆ ಶುಭಾಶಯ ಗಳನ್ನು ಕೋರಿ ಟ್ವೀಟ್ ಮಾಡಿದ್ದಾರೆ.
ಹಿಮಾಚಲ ಪ್ರದೇಶದವರಾದ ಜಗತ್ ಪ್ರಕಾಶ್ ನಡ್ಡಾ ಪಟನಾದಲ್ಲಿ 1960ರಲ್ಲಿ ನಾರಾಯಣ್ ಲಾಲ್ ನಡ್ಡಾ ಮತ್ತು ಕೃಷ್ಣಾ ನಡ್ಡ ಅವರ ಪುತ್ರನಾಗಿ ಜನಿಸಿದರು. ಪಟನಾದಲ್ಲೇ ಶಿಕ್ಷಣ ಪಡೆದ ಅವರು ಕಾನೂನು ಪದವಿ ವ್ಯಾಸಂಗ ಮಾಡಿದ್ದಾರೆ.
1991ರಲ್ಲಿ ಮಲ್ಲಿಕಾ ನಡ್ಡಾ ಅವರನ್ನು ವಿವಾಹವಾಗಿರುವ ಜೆಪಿ ನಡ್ಡಾ ಅವರಿಗೆ ಇಬ್ಬರು ಪುತ್ರರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿ, ಅಖಿಲ ಭಾರತೀಯ ವಿದ್ಯಾರ್ಥಿಪರಿಷತ್ (ಎಬಿವಿಪಿ) ಕಾರ್ಯಕರ್ತರಾಗಿ ವಿವಿಧ ಹೊಣೆಗಾರಿಕೆ ನಿಭಾಯಿಸಿದ್ದ ಅವರು, ಬಿಜೆಪಿ ಯುವಮೋರ್ಚಾದಲ್ಲೂ ಕೆಲಸ ಮಾಡಿದ್ದಾರೆ.