ಅಮರಾವತಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಮ್ಮ ಸಚಿವ ಸಂಪುಟ ಪುನರ್ ರಚನೆ/ವಿಸ್ತರಣೆ ಮಾಡಿದ್ದಾರೆ.
ಚುನಾವಣೆಯಲ್ಲಿ ನಟಿ, ವೈಎಸ್ಸಾರ್ ಸಿಪಿ ನಾಯಕಿ ರೋಜಾ ಅವರು ನಗರಿ ವಿಧಾನಸಭಾ ಕ್ಷೇತ್ರದಿಂದ ಮರು ಆಯ್ಕೆಯಾದರೂ ಸಚಿವ ಸ್ಥಾನ ಸಿಕ್ಕಿರಲಿಲ್ಲ, ಆದರೆ, ರೋಜಾ ಸೆಲ್ವಮಣಿ ಭಾವನಾತ್ಮಕವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದಲ್ಲದೆ ಸಿಎಂ ಜಗನ್ ಅವರಿಗೆ ಮುತ್ತು ನೀಡಿ, ಧನ್ಯವಾದ ಅರ್ಪಿಸಿದ್ದಾರೆ.
ಜಗನ್ ಸಚಿವ ಸಂಪುಟ ಪುನರ್ ರಚನೆ ಸೋಮವಾರ ನೆರವೇರಿದೆ. ಸಂಪುಟ ಪುನರ್ ರಚನೆಗೂ ಮುನ್ನ ಸುಮಾರು 24 ಮಂದಿ ಸಚಿವರ ರಾಜೀನಾಮೆ ಯನ್ನು ಅಧಿಕೃತವಾಗಿ ರಾಜ್ಯಪಾಲರಿಗೆ ಸಲ್ಲಿಸಲಾಗಿತ್ತು. ಬೆನ್ನಲ್ಲೇ ಹೊಸದಾಗಿ ಮತ್ತೊಮ್ಮೆ ಜಗನ್ ತಮ್ಮ ಸಂಪುಟ ರಚಿಸಿದ್ದಾರೆ. ಏ.11ರಂದು ಹೊಸ ಸಂಪುಟ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಅಂಬಟಿ ರಾಂಬಾಬು ಮೊದಲು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸ್ಪೀಕರ್ ತಮ್ಮಿನೇನಿ ಕೂಡ ಗೈರು ಹಾಜರಾ ಗಿದ್ದರು. ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ರೋಜಾ ಭಾವುಕರಾಗಿದ್ದರು. ಆರ್ ಕೆ ರೋಜಾ ಎಂಬ ಹೆಸರಿನ ನಾನು ಎಂದು ತೆಲುಗು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ, ಕಣ್ಣೀರನ್ನು ಕಂಟ್ರೋಲ್ ಮಾಡುತ್ತಾ ಜಗನ್ ಬಳಿ ತೆರಳಿ ಕಾಲಿಗೆರಗಿ, ಜಗನ್ ಕೈ ಹಿಡಿದು ಪ್ರೀತಿಯಿಂದ ಮುತ್ತಿಕ್ಕಿ, ಸಚಿವ ಸ್ಥಾನ ನೀಡಿದ್ದಕ್ಕೆ ಧನ್ಯವಾದ ಅರ್ಪಿಸಿದರು.
ಬಣ್ಣದ ಬದುಕು, ಶೂಟಿಂಗ್ ಮರೆತು ಜಗನ್ ಆಶಯದಂತೆ ಜನತೆಗಾಗಿ ಕಾರ್ಯ ನಿರ್ವಹಿಸುವುದಾಗಿ ರೋಜಾ ಘೋಷಿಸಿದ್ದಾರೆ. ಕೊನೆ ಕ್ಷಣದ ತನಕ ಸಚಿವ ಸ್ಥಾನ ಸಿಗುವ ಬಗ್ಗೆ ಸಕತ್ ಟೆನ್ಶನ್ ಇತ್ತು. ಯಾವುದೇ ಖಾತೆ ಸಿಕ್ಕರೂ ಓಕೆ ಎಂದಿರುವ ರೋಜಾಗೆ ಗೃಹ ಖಾತೆ ಸಿಗುವ ಬಗ್ಗೆ ಸುದ್ದಿ ಹಬ್ಬಿದೆ. ಸಂಜೆ ವೇಳೆಗೆ ನೂತನ ಸಚಿವರುಗಳ ಖಾತೆ ಹಂಚಿಕೆಯಾಗುವ ಸಾಧ್ಯತೆಯಿದೆ.