Thursday, 12th December 2024

ಮಂದಿರ ಪರಿಕ್ರಮ ಪ್ರಕಲ್ಪ, ಜಗನ್ನಾಥ ದೇವಸ್ಥಾನ ಹೆರಿಟೇಜ್ ಕಾರಿಡಾರ್ ಯೋಜನೆ ಉದ್ಘಾಟನೆ

ಪುರಿ: ಸುಮಾರು 800 ಕೋಟಿ ರೂ. ವೆಚ್ಚದದಲ್ಲಿ ನಿರ್ಮಾಣ ಮಾಡಲಾಗಿರುವ ಮಂದಿರ ಪರಿಕ್ರಮ ಪ್ರಕಲ್ಪ ಅಥವಾ ಜಗನ್ನಾಥ ದೇವಸ್ಥಾನ ಹೆರಿಟೇಜ್ ಕಾರಿಡಾರ್ ಯೋಜನೆಯನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಉದ್ಘಾಟಿಸಿದರು.

ಯೋಜನೆಯು ಪಾರ್ಕಿಂಗ್ ಪ್ರದೇಶಗಳು, ಶ್ರೀ ಸೇತು (ಸೇತುವೆ), ಶ್ರೀ ದಂಡಾ (ರಸ್ತೆ), ಯಾತ್ರಿಗಳ ಸಂಚಾರವನ್ನು ಸುಗಮಗೊಳಿಸಲು ಬಡಾ ದಂಡಕ್ಕೆ ಸಮಾನಾಂತರವಾಗಿ ಚಲಿಸುವುದು, ಯಾತ್ರಾ ಕೇಂದ್ರ, ವಿಶ್ರಾಂತಿ ಕೊಠಡಿ ಸೌಲಭ್ಯಗಳು, ಜಗನ್ನಾಥ ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರವಾಸಿಗರಿಗೆ ಉಡುಪುಗಳು, ಶೌಚಾಲಯಗಳು ಮತ್ತು ಇತರ ಸೌಕರ್ಯಗಳನ್ನು ಒದಗಿಸುವುದಾಗಿದೆ.

ಉದ್ಘಾಟನಾ ಸಮಾರಂಭಕ್ಕೆ ಈಗಾಗಲೇ ಒಡಿಶಾ ಮತ್ತು ದೇಶದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಇಲ್ಲಿಗೆ ಜಮಾಯಿಸಿದ್ದಾರೆ. ಪಟ್ನಾ ಯಕ್ ಅವರು ಯೋಜನೆಯ ಕುರಿತು ಕೆಲವು ಸಾಕ್ಷ್ಯಚಿತ್ರಗಳನ್ನು ಸಹ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

ದೇಶಾದ್ಯಂತ 90 ದೇಗುಲಗಳು ಮತ್ತು ಧಾರ್ಮಿಕ ಸಂಸ್ಥೆಗಳಿಂದ ಅನೇಕ ಸಾಧುಗಳು ಈಗಾಗಲೇ ಪವಿತ್ರ ಪಟ್ಟಣವನ್ನು ತಲುಪಿದ್ದಾರೆ ಮತ್ತು ಅವರ ಸುಗಮ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಜಗನ್ನಾಥ ದೇವಾಲಯದ ಆಡಳಿತ (ಎಸ್‍ಜೆಟಿಎ) ಮುಖ್ಯ ಆಡಳಿತಾಕಾರಿ ರಂಜನ್ ಕುಮಾರ್ ದಾಸ್ ತಿಳಿಸಿದ್ದಾರೆ.

ಪರಿಕ್ರಮದಲ್ಲಿ 900 ಅತಿಥಿಗಳಿಗೆ ದೊಡ್ಡ ಡಿಜಿಟಲ್ ಪರದೆಗಳನ್ನು ಅಳವಡಿಸಲಾಗಿರುವ ವಿಶೇಷ ಸಭಾಂಗಣವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಜನರು ಭಾಗವಹಿಸಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ಸಾರ್ವಜನಿಕ ರಜೆ ಘೋಷಿಸಿದೆ. ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ಕಾಲೇಜುಗಳು ಮುಚ್ಚಲ್ಪಡುತ್ತವೆ.