Monday, 25th November 2024

ಜಮ್ಮು-ಜೋಧ್​​ಪುರ ಎಕ್ಸ್‌ಪ್ರೆಸ್ ರೈಲಿಗೆ ಬಾಂಬ್ ಬೆದರಿಕೆ ಕರೆ

ಚಂಡೀಗಢ: ಜಮ್ಮುವಿನಿಂದ ರಾಜಸ್ಥಾನದ ಜೋಧ್​​ಪುರಕ್ಕೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲಿಗೆ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಪಂಜಾಬ್‌ನ ಫಿರೋಜ್‌ಪುರದ ಕಾಸು ಬೇಗು ನಿಲ್ದಾಣದಲ್ಲಿ ನಿಲ್ಲಿಸಲಾಯಿತು. ಪೊಲೀಸ್ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ.

ಬಾಂಬ್ ಬೆದರಿಕೆಯನ್ನು ಫಿರೋಜ್‌ಪುರದ ಎಸ್‌ಎಸ್‌ಪಿ ಸೌಮ್ಯ ಮಿಶ್ರಾ ಖಚಿತಪಡಿಸಿದ್ದಾರೆ.

ಜಮ್ಮುತಾವಿ -ಭಗತ್ ಕಿ ಕೋಠಿ ಎಕ್ಸ್‌ಪ್ರೆಸ್‌ಗೆ (ರೈಲು ಸಂಖ್ಯೆ 19926) ಫಿರೋಜ್‌ಪುರ ಬಳಿ ಬಾಂಬ್ ಬೆದರಿಕೆ ವರದಿಯಾಗಿದ್ದು, ಪೊಲೀಸರು ಮತ್ತು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸೇರಿದಂತೆ ಭದ್ರತಾ ಪಡೆಗಳಿಂದ ತಕ್ಷಣದ ಕ್ರಮಕೈಗೊಳ್ಳಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಫಿರೋಜ್‌ಪುರದಿಂದ 10 ಕಿಲೋಮೀಟರ್ ದೂರದಲ್ಲಿರುವ ಕಾಸು ಬೇಗು ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಲಾಗಿತ್ತು.

ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು ಶೋಧ ಕಾರ್ಯ ನಡೆಯುತ್ತಿದೆ. ಬಾಂಬ್ ಸ್ಕ್ವಾಡ್ ಘಟಕಗಳು, ಅಗ್ನಿಶಾಮಕ ದಳ ಮತ್ತು ವೈದ್ಯಕೀಯ ತಂಡಗಳು ಘಟನಾ ಸ್ಥಳದಲ್ಲಿದ್ದು, ಪ್ರತಿಯೊಬ್ಬರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಫಿರೋಜ್‌ಪುರದ ಪೊಲೀಸ್ ವರಿಷ್ಠಾಧಿಕಾರಿ ರಣಧೀರ್ ತಿಳಿಸಿದ್ದಾರೆ.