Friday, 22nd November 2024

J&K Assembly: ಕಾಶ್ಮೀರದಲ್ಲಿ ಇಂದೂ ಹೈಡ್ರಾಮಾ; ಕೋಲಾಹಲ ಸೃಷ್ಟಿಸಿದ 15 ಬಿಜೆಪಿ ಶಾಸಕರು, ಎಂಜಿನಿಯರ್‌ ರಶೀದ್‌ ಸಹೋದರ ಸದನದಿಂದ ಔಟ್‌!

JK

ಶ್ರೀನಗರ: ಆರ್ಟಿಕಲ್‌ 370 ಮತ್ತು ವಿಶೇಷ ಸ್ಥಾನಮಾನ(JK Special Status) ಮರುಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ವಿಧಾನಸಭೆ(J&K Assembly)ಯಲ್ಲಿ ಇಂದೂ ಕೂಡ ಕೋಲಾಹಲ ಮುಂದುವರಿದಿದೆ. ಪರಿಸ್ಥಿತಿ ವಿಕೋಪಕ್ಕೆ ತೆರಳಿದಾಗ ಸ್ಪೀಕರ್‌ ಅಬ್ದುಲ್‌ ರಹೀಂ ರಾಥಾರ್‌ ಬಿಜೆಪಿಯ 15ಕ್ಕೂ ಹೆಚ್ಚು ಶಾಸಕರನ್ನು ಸದನದಿಂದ ಹೊರಗಟ್ಟಿದ್ದಾರೆ.

ಎರಡು ದಿನಗಳ ಹಿಂದೆ ಎನ್‌ಸಿ ಸರ್ಕಾರ ಆರ್ಟಿಕಲ್‌ 370 ಮತ್ತು ವಿಶೇಷ ಸ್ಥಾನಮಾನ ಮರುಸ್ಥಾಪನೆಗೆ ನಿರ್ಣಯ ಅಂಗೀಕರಿಸಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಶಾಸಕರು ನಿನ್ನೆ ಕೋಲಾಹಲ ಸೃಷ್ಟಿಸಿದ್ದರು. ಇದು ಸಾಲದೆನ್ನುವಂತೆ ಅವಾಮಿ ಇತ್ತೇಹದ್‌ ಪಕ್ಷ ಶಾಸಕ ಮತ್ತು ಜೈಲಿನಲ್ಲಿರುವ ಸಂಸದ ಎಂಜಿನಿಯರ್‌ ರಶೀದ್‌ ಸಹೋದರ ಖುರ್ಷಿದ್‌ ಅಹ್ಮದ್‌ ಶೇಖ್‌ ಆರ್ಟಿಕಲ್‌ 370 ಮತ್ತು ವಿಶೇಷ ಸ್ಥಾನಮಾನ ಮರುಸ್ಥಾಪನೆಗೆ ಆಗ್ರಹಿಸಿ ಬ್ಯಾನರ್‌ ಪ್ರದರ್ಶನ ಮಾಡಿದ್ದರು. ಇದರಿಂದ ಕೆರಳಿದ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು.

ಇಂದು ಕೂಡ ಇದೇ ಪ್ರತಿಭಟನೆ ಮುಂದುವರಿದಿದ್ದು, ಬಿಜೆಪಿ ಶಾಸಕರು ಮತ್ತು ಖುರ್ಷೀದ್‌ ಅಹ್ಮದ್‌ ಶೇಖ್‌ ನಡುವೆ ಭಾರೀ ಘರ್ಷಣೆ ಏರ್ಪಟ್ಟಿತು. ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಪೀಪಲ್ಸ್ ಕಾನ್ಫರೆನ್ಸ್ ಮುಖ್ಯಸ್ಥ ಮತ್ತು ಹಂದ್ವಾರ ಶಾಸಕ ಸಜಾದ್ ಲೋನ್ ಅವರು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಪುಲ್ವಾಮಾ ಶಾಸಕ ವಹೀದ್ ಪಾರಾ ಆರ್ಟಿಕಲ್ 370 ಅನ್ನು ಮರುಸ್ಥಾಪಿಸುವಂತೆ ಪೋಸ್ಟರ್ ಅನ್ನು ಪ್ರದರ್ಶಿಸಿದರು.

ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಟೇಬಲ್ ಮೇಲೆ ನಿಂತು ಪ್ರತಿಭಟನೆ ಆರಂಭಿಸಿದರು. ಏತನ್ಮಧ್ಯೆ, ಖುರ್ಷಿದ್ ಅಹ್ಮದ್ ಶೇಖ್ ಶಾಸಕರನ್ನು ಬೆಂಬಲಿಸಿ ಬಾವಿಗೆ ನುಗ್ಗಿದರು. ಶಾಸಕರನ್ನು ನಿಯಂತ್ರಿಸಲು ಸಾಧ್ಯವಾಗದ ಹಿನ್ನೆಲೆ ಮಾರ್ಷಲ್‌ಗಳಿಗೆ ಶಾಸಕರನ್ನು ಸದನದಿಂದ ಹೊರ ಹಾಕುವಂತೆ ಆದೇಶಿಸಿದರು.

ಈ ಸುದ್ದಿಯನ್ನೂ ಓದಿ: JK Special Status: ಜಮ್ಮು-ಕಾಶ್ಮೀರ ಸದನದಲ್ಲಿ ಮೊಳಗಿದ ಜೈ ಶ್ರೀರಾಮ್‌ ಘೋಷಣೆ; ಭಾರೀ ಕೋಲಾಹಲ

ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ಮರುಸ್ಥಾಪನೆ ವಿಚಾರ ವಿಧಾನಸಭೆಯಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಬಿಜೆಪಿ ಸದಸ್ಯರ ಪ್ರತಿಭಟನೆಯ ನಡುವೆಯೇ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯು ಬುಧವಾರ ಸಂವಿಧಾನದ 370 ನೇ ವಿಧಿಯನ್ನು ಮರುಸ್ಥಾಪಿಸುವ ನಿರ್ಣಯವನ್ನು ಅಂಗೀಕರಿಸಿದೆ. ಜಮ್ಮು-ಕಾಶ್ಮೀರ ಸದನ ಸಭೆಯ ನಂತರ ನ್ಯಾಶನಲ್ ಕಾನ್ಫರೆನ್ಸ್ ಹಿರಿಯ ನಾಯಕ ಮತ್ತು ಡಿಸಿಎಂ ಸುರೀಂದರ್ ಸಿಂಗ್ ಚೌಧರಿ ಅವರು ಸಂವಿಧಾನ ಪರಿಚ್ಛೇದ 370 ಮರುಸ್ಥಾಪನೆ ಕುರಿತು ನಿರ್ಣಯವನ್ನು ಮಂಡಿಸಿದ್ದರು.